ಬೆಂಗಳೂರು: ಆಯುಧ ಪೂಜೆ ಆಚರಣೆ ಬಳಿಕ ನಗರದಾದ್ಯಂತ ಹೆಚ್ಚು ಕಸ ಕಂಡುಬಂದಿದೆ. ಹಬ್ಬದ ಮರುದಿನವಾದ ಸೋಮವಾರ 1,500 ಟನ್ ಹೆಚ್ಚುವರಿ ಕಸ ಸಂಗ್ರಹವಾಗಿದೆ.
ಆಯುಧ ಪೂಜೆ ವೇಳೆ ಮನೆಯಲ್ಲಿರುವ ವಾಹನಗಳು, ಯಂತ್ರೋಪಕರಣಗಳು ಹಾಗೂ ಮಳಿಗೆಗಳಿಗೆ ಪೂಜೆ ಮಾಡುವುದು ವಾಡಿಕೆ. ಇದರ ಪರಿಣಾಮ ಹಬ್ಬದಲ್ಲಿ ವಿಶೇಷವಾಗಿ ಬಳಸುವ ಹೂವು, ಬಾಳೆಕಂದು, ಮಾವಿನ ಸೊಪ್ಪು, ಬೂದುಗುಂಬಳ ಮಾರಾಟದ ಅಂಗಡಿಗಳು ನಗರದ ವಿವಿಧೆಡೆ ಕಿರು ಮಾರುಕಟ್ಟೆಗಳಂತೆ ತಲೆ ಎತ್ತಿದ್ದವು.
ಕೆ.ಆರ್.ಮಾರುಕಟ್ಟೆ, ಜಯನಗರ, ಗಾಂಧಿನಗರ, ಮಲ್ಲೇಶ್ವರ, ಯಶವಂತಪುರ, ಬಸವೇಶ್ವರನಗರ, ವಿಜಯನಗರ, ಬನಶಂಕರಿ, ಟಿ.ದಾಸರಹಳ್ಳಿ, ರಾಜಾಜಿನಗರ, ಸಾರಕ್ಕಿ, ಬಸವನಗುಡಿ, ಗಾಂಧಿಬಜಾರ್, ಹೆಬ್ಬಾಳ, ಯಲಹಂಕ, ಮತ್ತಿಕೆರೆ, ಜಾಲಹಳ್ಳಿ, ಯಶವಂತಪುರ, ಮಹಾಲಕ್ಷ್ಮಿ ಬಡಾವಣೆ, ಮಾಗಡಿ ರಸ್ತೆ, ಮೈಸೂರು ರಸ್ತೆ, ಕೆ.ಆರ್.ಪುರ ಹಾಗೂ ಇಂದಿರಾನಗರದ ಪ್ರಮುಖ ರಸ್ತೆಬದಿಗಳಲ್ಲಿ ಮಾವಿನ ಸೊಪ್ಪು, ಬಾಳೆಕಂಬ, ಹೂವಿನ ತ್ಯಾಜ್ಯಗಳು ರಾಶಿ ಬಿದ್ದಿದ್ದವು.
ನಗರದಲ್ಲಿ ಭಾನುವಾರ ಸುರಿದ ಮಳೆಯಿಂದ ಕಸ ಕೊಳೆತಿದೆ.
ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರೂ, ಕಸ ವಿಲೇವಾರಿ ನಿಧಾನಗತಿಯಲ್ಲಿ ನಡೆಯುತ್ತಿರುವುದರಿಂದ ಇನ್ನೂ ಹಲವೆಡೆ ಸಂಗ್ರಹವಾಗಿರುವ ಕಸ ತೆರವಾಗಿಲ್ಲ.
'ಸಾಮಾನ್ಯ ದಿನದಲ್ಲಿ 1,200 ಟನ್ ಹಸಿಕಸ ಹಾಗೂ 3 ಸಾವಿರ ಟನ್ ಒಣ ತ್ಯಾಜ್ಯ ಸಂಗ್ರಹವಾಗುತ್ತದೆ. ಹಬ್ಬದ ಕಾರಣದಿಂದ ಈ ಬಾರಿ ಹೆಚ್ಚುವರಿ 1,500 ಟನ್ ಕಸ ಬಿದ್ದಿದೆ. ಒಂದು ದಿನದೊಳಗೆ ಕಸ ವಿಲೇವಾರಿ ಮಾಡಲಾಗುವುದು' ಎಂದು ಪಾಲಿಕೆ ವಿಶೇಷ ಆಯುಕ್ತ (ಘನ ತ್ಯಾಜ್ಯ) ಡಿ.ರಂದೀಪ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.