ADVERTISEMENT

Dasara 2024: ಪುರಾಣ ಕಥೆ ಹೇಳುವ ಗೊಂಬೆಗಳು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 0:10 IST
Last Updated 8 ಅಕ್ಟೋಬರ್ 2024, 0:10 IST
ಅಂದ್ರಹಳ್ಳಿಯ ಶ್ರೀವಿದ್ಯಾಮಾನ್ಯ ವಿದ್ಯಾಕೇಂದ್ರದ ಶಾಲೆಯಲ್ಲಿ ವಿದ್ಯಾರ್ಥಿಗಳು ಜೋಡಿಸಿರುವ ಗೊಂಬೆಗಳು.
ಅಂದ್ರಹಳ್ಳಿಯ ಶ್ರೀವಿದ್ಯಾಮಾನ್ಯ ವಿದ್ಯಾಕೇಂದ್ರದ ಶಾಲೆಯಲ್ಲಿ ವಿದ್ಯಾರ್ಥಿಗಳು ಜೋಡಿಸಿರುವ ಗೊಂಬೆಗಳು.   

ಪೀಣ್ಯ ದಾಸರಹಳ್ಳಿ: ತಿರುಪತಿಯ ಏಳು ಬೆಟ್ಟಗಳು, ಹಂಪಿ ಉತ್ಸವ, ಗ್ರಾಮೀಣ ಬದುಕಿನ ಚಿತ್ರಣ, ರಾಮಾಯಣ, ಮಹಾಭಾರತದ ಕಥನಗಳು.. 

ದಸರಾ ಉತ್ಸವದ ಅಂಗವಾಗಿ ಅಂದ್ರಹಳ್ಳಿಯ ಶ್ರೀವಿದ್ಯಮಾನ್ಯ ವಿದ್ಯಾಕೇಂದ್ರದ ಶಾಲೆಯಲ್ಲಿ ವಿದ್ಯಾರ್ಥಿಗಳು ಜೋಡಿಸಿರುವ ಗೊಂಬೆಗಳಲ್ಲಿ ಕಾಣುವ ‘ದೃಶ್ಯ ಕಾವ್ಯ’ ಇದು.

ವಿದ್ಯಾರ್ಥಿಗಳು, ರಾಮಾಯಣ, ಮಹಾಭಾರತದ ಘಟನೆಗಳನ್ನು ವಿವರಿಸುವಂತೆ ಅನುಕ್ರಮವಾಗಿ ಗೊಂಬೆಗಳನ್ನು ಜೋಡಿಸಿದ್ದಾರೆ. ಶ್ರೀಕೃಷ್ಣನ ಜನನ, ಕಂಸ ವಧೆ, ಶ್ರೀಕೃಷ್ಣ ಲೀಲೆ, ಕೃಷ್ಣ ಸುಧಾಮರ ಕಥೆ, ದ್ರೌಪದಿಯ ಸ್ವಯಂವರ, ಗೀತೋಪದೇಶ, ದುರ್ಯೋಧನನ ಸಂಹಾರದಂತಹ ಘಟನೆಗಳನ್ನು ಪರಿಚಯಿಸುವ ಗೊಂಬೆಗಳು ಪ್ರದರ್ಶನದಲ್ಲಿವೆ.

ADVERTISEMENT

ಶ್ರೀರಾಮನ ಜನನ, ಬಾಲ್ಯ, ತಾಟಕಿಯ ಸಂಹಾರ, ಸೀತಾ ಸ್ವಯಂವರ, ವನವಾಸ, ಸೀತಾಪಹರಣ, ಸೇತುವೆ ನಿರ್ಮಾಣ, ಲಂಕಾ ದಹನ, ರಾವಣ ಸಂಹಾರ, ಶ್ರೀರಾಮನ ಪಟ್ಟಾಭಿಷೇಕ, ಅಶ್ವಮೇಧಯಾಗ.. ಹೀಗೆ ಸಂಪೂರ್ಣ ರಾಮಾಯಣದ ಕಥೆಯನ್ನೂ ಗೊಂಬೆಗಳು ಹೇಳುತ್ತವೆ.

‘ನಮ್ಮ ಪುರಾಣ, ಸಂಸ್ಕೃತಿಯನ್ನು ಗೊಂಬೆಗಳ ಮೂಲಕ ಪರಿಚಯಿಸುವುದು ಈ ಉತ್ಸವದ ಉದ್ದೇಶವಾಗಿದೆ. ಮಕ್ಕಳಲ್ಲಿರುವ ಪ್ರತಿಭೆ ಕಂಡು ಅಚ್ಚರಿಯಾಗಿದೆ. ನವರಾತ್ರಿ ಮುಗಿಯುವವರೆಗೂ ಪೋಷಕರು ಮತ್ತು ಸಾರ್ವಜನಿಕರಿಗೆ ಗೊಂಬೆ ಪ್ರದರ್ಶನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ' ಎಂದು ಶಾಲೆಯ ಕಾರ್ಯದರ್ಶಿ ಭರತ್ ಸೌಂದರ್ಯ ತಿಳಿಸಿದರು.

‘ನಮ್ಮ ಶಾಲೆಯ ಮಕ್ಕಳು ರಾಮಾಯಣ, ಮಹಾಭಾರತವನ್ನು ಓದಿ ಅರ್ಥಮಾಡಿಕೊಂಡು, ಗೊಂಬೆಗಳ ಮೂಲಕ ಪ್ರಸ್ತುತಪಡಿಸಿದ್ದಾರೆ. ತಿರುಪತಿಯ ಏಳು ಬೆಟ್ಟಗಳು, ಹಂಪಿ ಉತ್ಸವ, ಗುಡ್ಡಗಾಡಿನಲ್ಲಿನ ರೈತರ ಜೀವನದಂತಹ ಘಟನೆಗಳನ್ನು ಅನಾವರಣಗೊಳಿಸಿದ್ದಾರೆ. ಇದಕ್ಕೆ ಶಾಲೆಯ ಆಡಳಿತ ಮಂಡಳಿಯ ಪ್ರೋತ್ಸಾಹ ಮತ್ತು ಪೋಷಕರ ಸಹಕಾರ ಮಹತ್ವದ್ದಾಗಿದೆ‘ ಎಂದು ಪ್ರಾಂಶುಪಾಲರಾದ ಶಾರದಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.