ಬೆಂಗಳೂರು: ಕೆ.ಆರ್.ಮಾರುಕಟ್ಟೆಯಲ್ಲಿ ದಸರಾ ವಿಶೇಷ ಎಂದೇ ಕರೆಯಲ್ಪಡುವ ಬಾಳೆ ಕಂಬ ಹಾಗೂ ಬೂದುಗುಂಬಳ ರಾಶಿಯೇ ಬಂದಿಳಿದಿದ್ದು, ಶುಕ್ರವಾರ ಮಾರಾಟ ಭರದಿಂದ ಸಾಗಿತು.
ಒಂದು ಮಾರು ಸೇವಂತಿಗೆ ಹೂವು ₹60ರಿಂದ ₹80ರಂತೆ ಮಾರಾಟವಾಯಿತು. ವಾಹನ ಮತ್ತು ಅಂಗಡಿ ಮುಂಗಟ್ಟುಗಳ ಮುಂದೆ ಕಟ್ಟುವ ಬಾಳೆ ಕಂಬಕ್ಕೂ ಹೆಚ್ಚಿನ ಬೇಡಿಕೆ ಇತ್ತು. ಸಣ್ಣ ಬಾಳೆ ಕಂಬದ ಬೆಲೆ ಜೋಡಿಗೆ ₹40ರಂತೆ ಬಿಕರಿಯಾಯಿತು.
ಕಳೆದ ವಾರವಷ್ಟೇ ₹80ರ ಗಡಿ ದಾಟಿದ್ದ ಈರುಳ್ಳಿ ದರ ದಿಢೀರ್ ಕುಸಿತವಾಗಿದ್ದು, ಪ್ರತಿ ಕೆ.ಜಿ.ಗೆ ₹30ರಿಂದ ₹40ರಂತೆ ಹಾಗೂ ₹100ಕ್ಕೆ ಮೂರು ಕೆ.ಜಿ.ಯಂತೆ ಮಾರಾಟವಾಯಿತು. ಉಳಿದ ತರಕಾರಿಗಳ ದರ ಕಡಿಮೆ ಇದ್ದುದು ಗ್ರಾಹಕರ ನಿರಾಳರಾಗಲು ಕಾರಣವಾಗಿತ್ತು.
ಹೂವಿನ ದರಗಳು ಕೊಂಚ ಏರಿಕೆ ಕಂಡಿದ್ದು, ಕನಕಾಂಬರ ಪ್ರತಿ ಕೆ.ಜಿ.ಗೆ ₹1,200, ಮಲ್ಲಿಗೆ ₹700 ದರವಿತ್ತು. ಹಣ್ಣಿನ ಬೆಲೆ ಸ್ಥಿರತೆ ಕಂಡುಬಂತು.
‘ಹಬ್ಬದ ವೇಳೆ ಗ್ರಾಹಕರು ಒಂದು ವಾರ ನಿರಂತರವಾಗಿ ಹೂವು, ಹಣ್ಣು, ತರಕಾರಿ ಖರೀದಿಸುತ್ತಾರೆ. ಕೆಲವರು ಈ ತಿಂಗಳೆಲ್ಲಾ ಆಯುಧ ಪೂಜೆ ಮಾಡುತ್ತಾರೆ. ಹೀಗಾಗಿ, ಪೂಜಾ ಸಾಮಗ್ರಿಗಳ ವ್ಯಾಪಾರದಿಂದ ಸ್ವಲ್ಪ ಲಾಭ ಪಡೆಯಬಹುದು’ ಎಂದು ವ್ಯಾಪಾರಿ ಮುನೇಶ್ ತಿಳಿಸಿದರು.
‘ಈರುಳ್ಳಿ ದರ ಏರಿಕೆಯಾದ ಸುದ್ದಿ ಕೇಳಿ ಗಾಬರಿಗೊಂಡೆ. ಈ ಬಾರಿ ದಸರಾ ಆಚರಣೆ ದುಬಾರಿಯಾಗುತ್ತದೆ ಎಂದುಕೊಂಡಿದ್ದೆ. ಆದರೆ, ಈರುಳ್ಳಿ ಬೆಲೆ ಕಡಿಮೆಯಾಗಿದೆ. ಉಳಿದ ತರಕಾರಿಗಳ ಬೆಲೆಯೂ ಅಷ್ಟೇನೂ ಜಾಸ್ತಿಯಾಗಿಲ್ಲ’ ಎಂದು ಗೃಹಿಣಿ ಹೇಮಶ್ರೀ ತಿಳಿಸಿದರು.
* ಹೂವು, ಹಣ್ಣು, ತರಕಾರಿಗಳ ಬೆಲೆ ಸ್ವಲ್ಪ ಏರಿಕೆಯಾಗಿದೆ. ಆಯುಧ ಪೂಜೆಯಷ್ಟರಲ್ಲಿ ಇನ್ನೂ ದರ ಏರಬಹುದು. ಹೀಗಾಗಿ ಮೊದಲೇ ಎಲ್ಲವನ್ನೂ ಖರೀದಿಸಿದ್ದೇನೆ.
-ಮಾರುತಿ, ಗ್ರಾಹಕ
*ದಸರಾಗೆ ಹಣ್ಣುಗಳನ್ನು ಹೆಚ್ಚಾಗಿ ಖರೀದಿಸುವುದಿಲ್ಲ. ಪೂಜೆಗೆ ಇಡಲು ನಾಲ್ಕೈದು ರೀತಿಯ ಹಣ್ಣು ಕೇಳುತ್ತಾರೆ. ಹಣ್ಣಿನ ವ್ಯಾಪಾರ ನಡೆಯುವುದಿಲ್ಲ. ದರ ಸ್ಥಿರತೆ ಕಾಯ್ದುಕೊಂಡಿದೆ
-ಕಮಲಮ್ಮ, ಹಣ್ಣಿನ ವ್ಯಾಪಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.