ಬೆಂಗಳೂರು: ದಸರಾ ಮಹೋತ್ಸವ ಸಂದರ್ಭದಲ್ಲಿ ವಾರಾಂತ್ಯ ಮೂರು ದಿನಗಳು ರಜೆ ಇರುವುದರಿಂದ ಪ್ರವಾಸ, ಧಾರ್ಮಿಕ ಸ್ಥಳ ಹಾಗೂ ಊರಿಗೆ ತೆರಳುವರ ಸಂಖ್ಯೆ ಹೆಚ್ಚಾಗಿದ್ದು, ನಗರದ ಬಸ್ ನಿಲ್ದಾಣಗಳೆಲ್ಲ ಗುರುವಾರ ಪ್ರಯಾಣಿಕರಿಂದ ಭರ್ತಿಯಾಗಿದ್ದವು.
ನಗರದಿಂದ ಹೊರಟ ಎಲ್ಲ ಬಸ್‌ಗಳು ಪ್ರಯಾಣಿಕರಿಂದ ತುಂಬಿದ್ದವು. ಬುಧವಾರ ರಾತ್ರಿಯಿಂದಲೇ ಜನರು ಊರಿನತ್ತ ತೆರಳಿದ್ದು ಕಂಡುಬಂತು. ಕೆಂಪೇಗೌಡ ಬಸ್‌ನಿಲ್ದಾಣ, ಯಶವಂತಪುರ, ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಕಂಟೋನ್ಮೆಂಟ್ ಹಾಗೂ ಬೈಯಪ್ಪನಹಳ್ಳಿ ನಿಲ್ದಾಣದಲ್ಲೂ ಪ್ರಯಾಣಿಕರ ದಟ್ಟಣೆಯಿತ್ತು. ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗಿತ್ತು.
ಖಾಸಗಿ ಬಸ್‌ಗಳಲ್ಲಿ ಪ್ರಯಾಣ ದರವು ದುಬಾರಿಯಾಗಿತ್ತು. ಕೊನೆಯ ಕ್ಷಣದಲ್ಲಿ ಬಂದ ಪ್ರಯಾಣಿಕರಿಗೆ ಸೀಟು ಲಭ್ಯ ಇಲ್ಲ ಎಂಬ ಉತ್ತರ ದೊರೆಯಿತು. ಇದರಿಂದ ಊರಿಗೆ ತೆರಳಲು ಬಂದ ಪ್ರಯಾಣಿಕರು ನಿರಾಸೆಗೆ ಒಳಗಾದರು.
ಕೆಲವು ಖಾಸಗಿ ಬಸ್‌ಗಳಲ್ಲಿ ಮಿತಿಗಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುತ್ತಿರುವುದು ತಪಾಸಣೆ ವೇಳೆ ಕಂಡುಬಂದಿದೆ. ಚಾಲಕರು ಹಾಗೂ ನಿರ್ವಾಹಕರಿಗೆ ಎಚ್ಚರಿಕೆ ನೀಡಿದ್ದು, ನೋಟಿಸ್ ಕೊಡಲಾಗಿದೆ ಎಂದು ಆರ್‌ಟಿಒ ಅಧಿಕಾರಿಗಳು ತಿಳಿಸಿದರು.
ವಾಹನ ದಟ್ಟಣೆ: ತುಮಕೂರು ರಸ್ತೆ, ಮೈಸೂರು ರಸ್ತೆ, ಬಳ್ಳಾರಿ ರಸ್ತೆಯಲ್ಲಿ ಗುರುವಾರ ರಾತ್ರಿಯಿಂದಲೇ ವಾಹನ ದಟ್ಟಣೆ ಕಂಡುಬಂತು. ಜಂಕ್ಷನ್‌ಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರಿಂದ ಚಾಲಕರು ಪರದಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.