ADVERTISEMENT

ವೈವಿಧ್ಯಮಯ ಖರ್ಜೂರ: ಹೆಚ್ಚಿದ ಬೇಡಿಕೆ

ರಂಜಾನ್‌ ಮಾಸ: ನಗರದಲ್ಲೇ 150 ಟನ್‌ಗೂ ಹೆಚ್ಚು ಮಾರಾಟದ ನಿರೀಕ್ಷೆ

ಖಲೀಲಅಹ್ಮದ ಶೇಖ
Published 3 ಏಪ್ರಿಲ್ 2023, 21:25 IST
Last Updated 3 ಏಪ್ರಿಲ್ 2023, 21:25 IST
ರಸೆಲ್‌ ಮಾರುಕಟ್ಟೆಯ ಅಂಗಡಿಯೊಂದರಲ್ಲಿ ಕಂಡುಬಂದ ವಿವಿಧ ಬಗೆಯ ಖರ್ಜೂರ
ರಸೆಲ್‌ ಮಾರುಕಟ್ಟೆಯ ಅಂಗಡಿಯೊಂದರಲ್ಲಿ ಕಂಡುಬಂದ ವಿವಿಧ ಬಗೆಯ ಖರ್ಜೂರ   

ಬೆಂಗಳೂರು: ರಂಜಾನ್‌ ಮಾಸದಲ್ಲಿ ಖರ್ಜೂರಕ್ಕೆ ಹೆಚ್ಚು ಬೇಡಿಕೆ. ಮುಸ್ಲಿಮರು ಉಪವಾಸ ಮುಗಿಸುವುದೇ ಖರ್ಜೂರ ಸೇವಿಸುವ ಮೂಲಕ. ಈ ವ್ರತಾಚರಣೆ ವೇಳೆ ನಗರದಲ್ಲೇ ದಾಖಲೆಯ 150 ಟನ್‌ಗೂ ಅಧಿಕ ಖರ್ಜೂರ ಮಾರಾಟವಾಗುತ್ತದೆ ಎಂದು ಅಂದಾಜಿಸಲಾಗಿದೆ.

ಶಿವಾಜಿನಗರ, ರಸೆಲ್ ಮಾರುಕಟ್ಟೆ, ಯಶವಂತಪುರ ಎಪಿಎಂಸಿ ಮಾರುಕಟ್ಟೆ, ಮಲ್ಲೇಶ್ವರ, ಜಯನಗರ 4ನೇ ಬ್ಲಾಕ್, ಬಸವನಗುಡಿ, ಹಳೇ ತರಗುಪೇಟೆ, ಹೊಸ ತರಗುಪೇಟೆಗಳಲ್ಲಿ ಖರ್ಜೂರ ವ್ಯಾಪಾರ ನಡೆಯುತ್ತದೆ. ವಿದೇಶದ ಬಗೆಬಗೆಯ ಖರ್ಜೂರಗಳು ಸಹ ಈಗ ಮಾರುಕಟ್ಟೆಯಲ್ಲಿ ಲಭ್ಯ. ಮುಸ್ಲಿಮರ ಜತೆಗೆ ಬೇರೆ ಸಮುದಾಯದವರು ಖರೀದಿಗೆ ಮುಗಿಬೀಳುತ್ತಿದ್ದಾರೆ.

‘ರಂಜಾನ್‌’ ಅಂಗವಾಗಿ ಮುಸ್ಲಿ
ಮರು ಒಂದು ತಿಂಗಳು ಉಪವಾಸ ವ್ರತ ಕೈಗೊಳ್ಳುತ್ತಾರೆ. ಪ್ರವಾದಿ ಮೊಹಮ್ಮದ್‌ ಅವರು ಇಫ್ತಾರ್‌ ವೇಳೆ, ಖರ್ಜೂರ ಸೇವಿಸಿ ರೋಜಾ ಮುಕ್ತಾಯಗೊಳಿಸುತ್ತಿದ್ದರು. ಮಸೀದಿ, ಮನೆಗಳಲ್ಲಿ ಸಂಜೆ ಆಯೋಜಸುತ್ತಿರುವ ಇಫ್ತಾರ್‌ ಕೂಟಗಳಲ್ಲಿ ಖರ್ಜೂರಕ್ಕೆ ಮೊದಲ
ಸ್ಥಾನವಿದೆ. ಖರ್ಜೂರ
ದಿಂದಲೇ ದಿನದ ಉಪವಾಸ ಮುಕ್ತಾಯಗೊಳಿಸುತ್ತಾರೆ’ ಎಂದು ಶಿವಾಜಿನಗರದ ರಸೆಲ್‌ ಮಾರ್ಕೆಟ್‌ ವ್ಯಾಪಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಇದ್ರೀಸ್‌ ಚೌಧರಿ ಮಾಹಿತಿ ನೀಡಿದರು.

ADVERTISEMENT

‘ಕೋವಿಡ್‌ ಅವಧಿಯಲ್ಲಿ ವ್ಯಾಪಾರಿಗಳು ಸಾಕಷ್ಟು ನಷ್ಟ ಅನುಭವಿಸಿದ್ದರು. ಎರಡು ವರ್ಷಗಳ ಬಳಿಕ ಈ ಬಾರಿ ಬೇಡಿಕೆ ಹೆಚ್ಚಿದ್ದು, ವ್ಯಾಪಾರ ಚೇತರಿಸಿಕೊಂಡಿದೆ. ನಗರದಲ್ಲಿ 1,000ಕ್ಕೂ ಹೆಚ್ಚು ಖರ್ಜೂರ ಮಾರಾಟ ಅಂಗಡಿಗಳಿದ್ದು, ರಂಜಾನ್ ಮಾಸದಲ್ಲೇ 150 ಟನ್‌ಗೂ ಅಧಿಕ ಖರ್ಜೂರ ಮಾರಾಟವಾಗುತ್ತದೆ’ ಎಂದು ಹೇಳಿದರು.

‘ಖರ್ಜೂರಗಳಲ್ಲಿ ಔಷಧೀಯ ಗುಣಗಳಿವೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಖರ್ಜೂರ ಅಚ್ಚುಮೆಚ್ಚು. ಅಜುವಾ ಖರ್ಜೂರಕ್ಕೆ ವಿಶೇಷ ಶಕ್ತಿ ಇದೆ. ನಿಶ್ಯಕ್ತಿ, ಚರ್ಮರೋಗ, ದೃಷ್ಟಿ ದೋಷ ಕಾಯಿಲೆ ನಿವಾರಣೆಗೆ ಸಹಕಾರಿ ಎನ್ನಲಾಗಿದೆ. ದಕ್ಷಿಣ ಆಫ್ರಿಕಾ ಮೂಲದ ಮೆಡ್‌ಜೋಲ್ ಖರ್ಜೂರ ಹೆಚ್ಚು ಸಿಹಿಯಾಗಿದ್ದು, ಅಧಿಕ ತಿರುಳು ಹೊಂದಿರುತ್ತದೆ‘ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.