ADVERTISEMENT

ಡೇಟಿಂಗ್ ಆ್ಯಪ್‌: ಸಲುಗೆ ಬೆಳೆಸಿ ಉದ್ಯಮಿಯಿಂದ ₹ 7 ಲಕ್ಷ ಸುಲಿಗೆ ಮಾಡಿದ ಮಹಿಳೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2022, 19:45 IST
Last Updated 25 ಆಗಸ್ಟ್ 2022, 19:45 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ನಗರದ ಉದ್ಯಮಿಯೊಬ್ಬರ ಜೊತೆ ಸಲುಗೆ ಬೆಳೆಸಿದ್ದ ಮಹಿಳೆಯೊಬ್ಬರು ಖಾಸಗಿ ಕ್ಷಣಗಳ ಫೋಟೊ ಹಾಗೂ ವಿಡಿಯೊ ಇಟ್ಟುಕೊಂಡು ₹ 7 ಲಕ್ಷ ಸುಲಿಗೆ ಮಾಡಿದ್ದು, ಈ ಸಂಬಂಧ ದಕ್ಷಿಣ ವಿಭಾಗ ವ್ಯಾಪ್ತಿಯ ಠಾಣೆಯೊಂದರಲ್ಲಿ ಪ್ರಕರಣ ದಾಖಲಾಗಿದೆ.

‘ಮಹಿಳೆ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡಿರುವ ಉದ್ಯಮಿಯೊಬ್ಬರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಬಿಲ್ಡರ್‌ ಆಗಿರುವ ಉದ್ಯಮಿ, ಡೇಟಿಂಗ್ ಆ್ಯಪ್‌ನಲ್ಲಿ ಖಾತೆ ತೆರೆದಿದ್ದರು. ಹೊರ ರಾಜ್ಯದ ನಿವಾಸಿಯಾಗಿರುವ ಮಹಿಳೆ, ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರು. ಅದನ್ನು ಉದ್ಯಮಿ ಸ್ವೀಕರಿಸುತ್ತಿದ್ದಂತೆ, ಮಹಿಳೆ ಸಂದೇಶ ಕಳುಹಿಸಲಾರಂಭಿಸಿದ್ದರು. ನಂತರ, ಇಬ್ಬರೂ ಹೆಚ್ಚು ಹೊತ್ತು ಚಾಟಿಂಗ್ ಮಾಡುತ್ತಿದ್ದರು.’

ADVERTISEMENT

‘ಮೊಬೈಲ್ ನಂಬರ್ ಬದಲಾಯಿಸಿಕೊಂಡಿದ್ದ ಇಬ್ಬರೂ, ಪರಸ್ಪರ ವಾಟ್ಸ್‌ಆ್ಯಪ್ ಚಾಟಿಂಗ್ ಹಾಗೂ ವಿಡಿಯೊ ಕರೆ ಮಾಡಲಾರಂಭಿಸಿದ್ದರು. ಇಬ್ಬರ ನಡುವೆ ಸಲುಗೆಯೂ ಬೆಳೆದಿತ್ತು. ಕೆಲ ತಿಂಗಳ ಹಿಂದೆಯಷ್ಟೇ ಇಬ್ಬರೂ ಮುಖಾಮುಖಿ ಭೇಟಿಯಾಗಿದ್ದರು. ಮೊದಲ ಭೇಟಿಯಲ್ಲಿ ಮತ್ತಷ್ಟು ಹತ್ತಿರವಾಗಿದ್ದ ಇಬ್ಬರೂ ಹಲವೆಡೆ ಪ್ರವಾಸಕ್ಕೆ ಹೋಗಿ ಬಂದಿದ್ದರು. ಇದೇ ವೇಳೆ ಖಾಸಗಿ ಕ್ಷಣಗಳನ್ನು ಕಳೆದಿದ್ದರು’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

₹ 7 ಲಕ್ಷ ಸುಲಿಗೆ, ಫ್ಲ್ಯಾಟ್‌ಗೆ ಒತ್ತಾಯ: ‘ಖಾಸಗಿ ಕ್ಷಣಗಳ ಫೋಟೊ ಹಾಗೂ ವಿಡಿಯೊ ಚಿತ್ರೀಕರಿಸಿಕೊಂಡಿದ್ದ ಮಹಿಳೆ, ಅವುಗಳನ್ನು ತೋರಿಸಿ ಉದ್ಯಮಿಯನ್ನು ಬ್ಲ್ಯಾಕ್‌ಮೇಲ್ ಮಾಡಲಾರಂಭಿಸಿದ್ದರು. ಹಣ ನೀಡದಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೊ ಹಾಗೂ ವಿಡಿಯೊ ಅಪ್‌ಲೋಡ್ ಮಾಡುವುದಾಗಿಯೂ ಬೆದರಿಸಿದ್ದರು. ಇದಕ್ಕೆ ಹೆದರಿದ ಉದ್ಯಮಿ, ಹಂತ ಹಂತವಾಗಿ ₹ 7 ಲಕ್ಷ ನೀಡಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಫ್ಲ್ಯಾಟ್‌ ಹಾಗೂ ಮತ್ತಷ್ಟು ಹಣ ಬೇಕೆಂದು ಮಹಿಳೆ ಪುನಃ ಬೇಡಿಕೆ ಇರಿಸಿದ್ದರು. ಬೇಸತ್ತ ಉದ್ಯಮಿ, ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ಮಹಿಳೆ ತಲೆಮರೆಸಿಕೊಂಡಿದ್ದಾರೆ’ ಎಂದು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.