ಬೆಂಗಳೂರು: ‘ಸೈಬರ್ ಆವರಣ ಮತ್ತು ಭೌತಿಕ ಆವರಣದ ಒಟ್ಟುಗೂಡಿಸುವಿಕೆಯು ಮುಂದಿನ ದಿನಗಳಲ್ಲಿ ಆರ್ಥಿಕತೆ ಸೇರಿದಂತೆ ಎಲ್ಲ ವಲಯಗಳನ್ನು ಅಗಾಧವಾಗಿ ಪ್ರಭಾವಿಸುವ ತಾಂತ್ರಿಕತೆ ಆಗಲಿದೆ’ ಎಂದು ಐಟಿ, ಬಿಟಿ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.
ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ಆಯೋಜಿಸಿರುವ, ನಾಲ್ಕು ದಿನಗಳ ಕಾಲ ನಡೆಯಲಿರುವ ‘ಭಾರತೀಯ ನಾವೀನ್ಯತಾ ಶೃಂಗಸಭೆ-2020’ ಅನ್ನು ಆನ್‌ಲೈನ್ ಮೂಲಕ ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ಈ ಶೃಂಗಸಭೆಯಲ್ಲಿ ‘ಕ್ಷಮತೆ ಮತ್ತು ಪುನಶ್ಚೈತನ್ಯ: ಐದನೇ ತಲೆಮಾರು -5.0 ಕ್ಕೆ ನಾವೀನ್ಯತೆ’ ಕುರಿತು ವಿಷಯ ಮಂಡನೆ, ಚರ್ಚೆ, ಸಂವಾದ ಹಾಗೂ ಸಮಾಲೋಚನೆ ನಡೆಯಲಿದೆ.
‘ಭೌತಿಕ ಆವರಣದಲ್ಲಿ ಅಳವಡಿಸಲಾಗುವ ಸೆನ್ಸಾರ್‌ಗಳು ಕಲೆಹಾಕುವ ಬೃಹತ್ ಪ್ರಮಾಣದ ದತ್ತಾಂಶಗಳನ್ನು ಕೃತಕ ಬುದ್ಧಿಮತ್ತೆಯ ನೆರವಿನಿಂದ ನಿಖರವಾಗಿ ವಿಶ್ಲೇಷಿಸಬಲ್ಲ ತಂತ್ರಜ್ಞಾನ ಇದಾಗಿದೆ. ವೈದ್ಯಕೀಯ ಕ್ಷೇತ್ರ, ಕೃಷಿ ಕ್ಷೇತ್ರ ಹಾಗೂ ವಿಶೇಷವಾಗಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಹಿನ್ನೆಲೆಯಲ್ಲಿ ಶೈಕ್ಷಣೀಯ ಕ್ಷೇತ್ರದ ಮೇಲೂ ಇದು ಹೆಚ್ಚಿನ ಪ್ರಭಾವ ಬೀರಲಿದೆ. ಮುಂದಿನ ಎರಡು ಅಥವಾ ಮೂರು ತಿಂಗಳಲ್ಲಿ ನಾವು ಈ ದಿಸೆಯಲ್ಲಿ ಮೊದಲ ಹೆಜ್ಜೆ ಇರಿಸಲಿದ್ದೇವೆ’ ಎಂದು ಅವರು ವಿವರಿಸಿದರು.
‘ಸೈಬರ್ ಆವರಣ ಹಾಗೂ ಭೌತಿಕ ಆವರಣದ ಒಟ್ಟುಗೂಡಿಸುವಿಕೆಯನ್ನು ಅಳವಡಿಸಿಕೊಳ್ಳುವುದರಿಂದ ಸರ್ಕಾರದ ಕಾರ್ಯಕ್ಷಮತೆ, ಉತ್ತರದಾಯಿತ್ವ, ಪಾರದರ್ಶಕತೆ, ಸಾಧನೆ ಅದೆಷ್ಟೋ ಪಟ್ಟು ಅಧಿಕವಾಗುವ ಸಾಧ್ಯತೆ ಇದೆ. ಇದು ಅಲ್ಪಾವಧಿಯಲ್ಲಿ ‘ಅಸ್ತಿತ್ವ ಉಳಿಸಿಕೊಳ್ಳುವ‘ ಕಾರ್ಯತಂತ್ರ ಹಾಗೂ ಮಧ್ಯಮಾವಧಿಯಲ್ಲಿ ‘ಅಭಿವೃದ್ಧಿ’ ಸಾಧಿಸುವ ಕಾರ್ಯತಂತ್ರದ ಶ್ರೇಷ್ಠ ಸಮನ್ವಯತೆಯಿಂದ ಕೂಡಿದ್ದಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.
‘ಒಂದು ವರ್ಷದಲ್ಲಿ ಸರ್ಕಾರವು ಉದ್ಯಮಶೀಲತೆ ಉತ್ತೇಜಿಸಲು ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ಎಲ್ಲ ರೀತಿಯ ಉದ್ಯಮಗಳನ್ನು ಬೆಳೆಸಲು ಏನೆಲ್ಲಾ ಸಾಧ್ಯವೋ ಅವೆಲ್ಲವನ್ನೂ ಮಾಡುವ ಇಚ್ಛಾಶಕ್ತಿಯನ್ನು ಸರ್ಕಾರ ಹೊಂದಿದೆ’ ಎಂದರು.
ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣ ರೆಡ್ಡಿ, ಭಾರತೀಯ ಕೈಗಾರಿಕೆಗಳ ಒಕ್ಕೂಟದ (ಸಿಐಐ) ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್, ಭಾರತದ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ನ ಮಹಾ ನಿರ್ದೇಶಕ ಡಾ. ಓಂಕಾರ್ ರಾಯ್, ಸಿಐಐ ಕರ್ನಾಟಕ ರಾಜ್ಯ ಮಂಡಳಿಯ ಅಧ್ಯಕ್ಷ ಸಂದೀಪ್ ಸಿಂಗ್, ಉಪಾಧ್ಯಕ್ಷ ರಮೇಶ್ ರಾಮದುರೈ ಕಾರ್ಯಕ್ರಮದಲ್ಲಿ ಹಾಜರಿದ್ದು ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.