ADVERTISEMENT

ಬೆಂಗಳೂರಿನಲ್ಲಿ ಮಳೆ‌ | ನಿಯಂತ್ರಣ ಕೊಠಡಿಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಭೇಟಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 23:28 IST
Last Updated 15 ಅಕ್ಟೋಬರ್ 2024, 23:28 IST
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರುವ ನಿಯಂತ್ರಣ ಕೊಠಡಿಗೆ ಮಂಗವಾರ ಸಂಜೆ ಭೇಟಿ ನೀಡಿ ಮಳೆ ಹಾಗೂ ಹಾನಿ ಕುರಿತ ಮಾಹಿತಿ ಪಡೆದರು
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರುವ ನಿಯಂತ್ರಣ ಕೊಠಡಿಗೆ ಮಂಗವಾರ ಸಂಜೆ ಭೇಟಿ ನೀಡಿ ಮಳೆ ಹಾಗೂ ಹಾನಿ ಕುರಿತ ಮಾಹಿತಿ ಪಡೆದರು   

ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರುವ ನಿಯಂತ್ರಣ ಕೊಠಡಿಗೆ ಮಂಗಳವಾರ ಸಂಜೆ ಭೇಟಿ ನೀಡಿದ್ದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಮಳೆ ಹಾಗೂ ಹಾನಿ ಕುರಿತ ಮಾಹಿತಿ ಪಡೆದರು.

ವಲಯ ಅಧಿಕಾರಿಗಳ ಜೊತೆ ವರ್ಚ್ಯುವಲ್ ಸಭೆ ನಡೆಸಿ, ಮಳೆ ವೇಳೆ ನಿಯಂತ್ರಣ ಕೊಠಡಿಯಲ್ಲಿದ್ದು ದಿನದ 24 ಗಂಟೆ ಕಾರ್ಯನಿರ್ವಹಿಸಬೇಕು. ಸ್ವಚ್ಛತಾ ಅಭಿಯಾನ ನಡೆಸಬೇಕು ಎಂದು ಸೂಚಿಸಿದರು.

‘ಪಾದಚಾರಿ ಮಾರ್ಗ ಹಾಗೂ ಮಳೆ ನೀರು ಹರಿಯುವ ಕಾಲುವೆಗಳಲ್ಲಿ ಸೇರಿರುವ ಕಸ ತೆಗೆಯಲು ಕಾರ್ಯಕ್ರಮ ರೂಪಿಸಲಾಗುವುದು. ಬೀದಿ ಬದಿಯ ವ್ಯಾಪಾರಿಗಳಲ್ಲಿ ಕೆಲವರು ಅಲ್ಲೇ ಕಸ ಬಿಟ್ಟು ಹೋಗುತ್ತಾರೆ. ಇದರಿಂದ ನೀರು ಹರಿಯಲು ಸಾಧ್ಯವಾಗುತ್ತಿಲ್ಲ. ಈ ಎಲ್ಲಾ ಅಂಶಗಳನ್ನು ನಾವು ಗಮನಿಸಿದ್ದೇವೆ. ಮಳೆಯ ನಡುವೆ ರಸ್ತೆಗುಂಡಿ ಮುಚ್ಚಲು ಆಗುವುದಿಲ್ಲ. ಹೀಗಾಗಿ ಮಳೆ ನಿಲ್ಲಲಿ. ನಂತರ ಅಗತ್ಯ ಕ್ರಮ ಕೈಗೊಳ್ಳುತ್ತೇವೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಬಿಬಿಎಂಪಿ ಆಡಳಿತಾಧಿಕಾರಿ ಉಮಾಶಂಕರ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಉಪಸ್ಥಿತರಿದ್ದರು.

ರಾಜ್ಯೋತ್ಸವ ಆಚರಣೆ: 

‘ನವೆಂಬರ್ 1ರಂದು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಎಲ್ಲಾ ಉದ್ದಿಮೆ, ಕಂಪನಿಗಳು ಕನ್ನಡ ರಾಜ್ಯೋತ್ಸವ ಆಚರಿಸಬೇಕು ಎಂದು ಸರ್ಕಾರದ ವತಿಯಿಂದ ಮನವಿ ಮಾಡುತ್ತಿದ್ದೇವೆ. ಶಾಲಾ ಕಾಲೇಜುಗಳಲ್ಲಿ ರಾಜ್ಯೋತ್ಸವದ ಜತೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಬೇಕು. ಬೆಂಗಳೂರಿನಲ್ಲಿರುವ ಜನರು ಹಾಗೂ ಮಕ್ಕಳಿಗೆ ಕನ್ನಡದ ಮಹತ್ವ ಅರಿಯುವಂತೆ ಮಾಡಬೇಕು’ ಎಂದು ತಿಳಿಸಿದರು.

‘ಕನ್ನಡ ಸಂಘಟನೆಗಳು ಯಾವುದೇ ಸಂಸ್ಥೆಗಳ ಮೇಲೆ ದಾಳಿ ಮಾಡಿ ಒತ್ತಾಯ ಮಾಡಬಾರದು. ಈ ವಿಚಾರವನ್ನು ಸರ್ಕಾರ ನಿಭಾಯಿಸಲಿದೆ. ಇದರಲ್ಲಿ ಯಾರೂ ಹಸ್ತಕ್ಷೇಪ ಮಾಡುವಂತಿಲ್ಲ‘ ಎಂದರು.

‘ದಾಳಿ, ಒತ್ತಾಯದಲ್ಲಿ ತೊಡಗಿದರೆ ಕಾನೂನು ಕ್ರಮ ಜರುಗಿಸಲಾಗುವುದು. ರಾಷ್ಟ್ರಧ್ವಜಕ್ಕೆ ಗೌರವ ನೀಡುವಂತೆ ನಮ್ಮ ನಾಡಧ್ವಜಕ್ಕೂ ಗೌರವ ನೀಡಬೇಕು’ ಎಂದು ಹೇಳಿದರು.

ಹೂಡಿಕೆದಾರ ಸ್ವರ್ಗ ಕಣ್ಣೀರು ಹಾಕುತ್ತಿದೆ: ಕುಮಾರಸ್ವಾಮಿ

ಬೆಂಗಳೂರು: ‘ಒಂದೇ ದಿನದ ಮಳೆಗೆ ಭಾರತದ ಸಿಲಿಕಾನ್ ವ್ಯಾಲಿ ಕೆರೆಯಂತೆ ಆಗಿದ್ದು ಇಂಥ ದುಸ್ಥಿತಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ಕೆಟ್ಟನೀತಿಗಳೇ ಕಾರಣ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ‘ಒಂದೇ ದಿನದ ವರುಣನ ಅಬ್ಬರಕ್ಕೆ ಬೆಂಗಳೂರಿನ ಮೂಲಸೌಕರ್ಯ ವ್ಯವಸ್ಥೆ ತತ್ತರಿಸಿ ಹೋಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ  ದುರಾಡಳಿತ ಮತ್ತು ಅಸಮರ್ಪಕ ನಿರ್ವಹಣೆಯಿಂದ ‘ಭಾರತದ ಐಟಿ ಕಾರಿಡಾರ್'ನಲ್ಲಿ ಪ್ರವಾಹಸದೃಶ ಪರಿಸ್ಥಿತಿ ತಲೆದೋರಿದೆ’ ಎಂದು ಅವರು ಪ್ರಕಟಣೆಯಲ್ಲಿ ದೂರಿದ್ದಾರೆ. ‘ಒಳಚರಂಡಿ ವ್ಯವಸ್ಥೆ ಹದಗೆಟ್ಟು ರಸ್ತೆಗಳು ನದಿಗಳಾಗಿವೆ. ಸರ್ಕಾರದ ಘೋರ ವೈಫಲ್ಯದಿಂದ ಬೆಂಗಳೂರಿನ ಜನರು ಮಳೆಗೆ ಸಿಕ್ಕಿ ನರಕಯಾತನೆ ಅನುಭವಿಸುತ್ತಿದ್ದಾರೆ. ಆಡಳಿತ ವ್ಯವಸ್ಥೆಯ ಕೆಟ್ಟ ನೀತಿಗಳು ನಾಡಪ್ರಭು ಕೆಂಪೇಗೌಡರು ಕಟ್ಟಿದ ಹೆಮ್ಮೆಯ ಬೆಂಗಳೂರು ನಗರವನ್ನು ಹಾಳುಗೆಡವಿವೆ’ ಎಂದು ಟೀಕಿಸಿದ್ದಾರೆ. ‘ಹೂಡಿಕೆದಾರ ಸ್ವರ್ಗವಾಗಿದ್ದ ಬೆಂಗಳೂರು ಜಾಗತಿಕ ಮಟ್ಟದ ತಂತ್ರಜ್ಞಾನದ ನೆಚ್ಚಿನ ನೆಲೆವೀಡಾಗಿದ್ದ ಬೆಂಗಳೂರು ಈಗ ಇನ್ನಿಲ್ಲದ ದುಸ್ಥಿತಿಗೆ ಸಿಲುಕಿ ಕಣ್ಣೀರು ಹಾಕುತ್ತಿದೆ’ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.