ಬೆಂಗಳೂರು: ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ನಗರದಲ್ಲಿ ಮಹಿಳೆಯರ ತುರ್ತು ಕರೆಗೆ ಪೊಲೀಸರು ಸ್ಪಂದಿಸುತ್ತಾರೆಯೇ ಎಂಬ ಬಗ್ಗೆ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಶನಿವಾರ ರಾತ್ರಿ ರಿಯಾಲಿಟಿ ಚೆಕ್ ಮಾಡಿದ್ದಾರೆ.
ಕರ್ತವ್ಯಕ್ಕೆ ನಿಯೋಜಿಸಿರುವ ಸಿಬ್ಬಂದಿ ಸಕ್ರಿಯರಾಗಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ರಾತ್ರಿ 1 ಗಂಟೆ ಸುಮಾರಿಗೆ ತಮ್ಮ ಸಿಬ್ಬಂದಿ ಜತೆ ನಗರದಲ್ಲಿ ಸುತ್ತಾಡಿದ್ದಾರೆ.
ಎಂ.ಜಿ. ರಸ್ತೆ, ಯುಬಿ ಸಿಟಿ, ರಿಚ್ಮಂಡ್ ರಸ್ತೆ ಸೇರಿದಂತೆ ಕೇಂದ್ರ ವಿಭಾಗದ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ಚೇತನ್ ಸಿಂಗ್ ಗಸ್ತಿನಲ್ಲಿದ್ದರು. ಈ ವೇಳೆ ಯುಬಿ ಸಿಟಿ ಸಮೀಪ ಮೂವರು ಯುವತಿಯರು ವಾಹನಕ್ಕೆ ಕಾಯುತ್ತಿರುವುದು ಗೊತ್ತಾಗಿ ಸ್ಥಳಕ್ಕೆ ತೆರಳಿದ್ದಾರೆ. ಯುವತಿಯರ ಬಳಿ ತೆರಳಿದ ಡಿಸಿಪಿ ತಡರಾತ್ರಿ ರಸ್ತೆ ಬದಿಯಲ್ಲಿ ನಿಂತಿರುವ ಬಗ್ಗೆ ವಿಚಾರಿಸಿದ್ದಾರೆ.
ಆಗ ಯುವತಿಯರು, ‘ತಾವು ಹರಿಯಾಣದವರು. ಸ್ನೇಹಿತೆ ಜತೆ ಊಟಕ್ಕೆ ಬಂದಿದ್ದೇವೆ. ಮನೆಗೆ ತೆರಳಲು ಕ್ಯಾಬ್‌ಗಾಗಿ ಕಾಯುತ್ತಿದ್ದೇವೆ’ ಎಂದಿದ್ದಾರೆ. ಆಗ ಚೇತನ್ ಸಿಂಗ್, ತುರ್ತು ಸಂದರ್ಭದಲ್ಲಿ ‘ನಮ್ಮ 100’ ಸಂಖ್ಯೆಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ. ಅಲ್ಲದೆ ಸ್ಮಾರ್ಟ್ ಫೋನ್‌ಗಳಲ್ಲಿ ‘ಸುರಕ್ಷಾ ಆ್ಯಪ್’ ಡೌನ್‌ಲೋಡ್ ಮಾಡಿಕೊಂಡು, ಅದನ್ನು ಬಳಸುವಂತೆ ಸಲಹೆ ನೀಡಿದ್ದಾರೆ.
‘ಈ ವೇಳೆ ಯುವತಿಯೊಬ್ಬಳು ಹರಿಯಾಣದಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ. ನಾನು ಅಲ್ಲಿನ ಸಚಿವರೊಬ್ಬರ ಸಹೋದರನ ಪುತ್ರಿ’ ಎಂದು ಪರಿಚಯಿಸಿಕೊಂಡಿದ್ದಾಳೆ. ಚೇತನ್ ಸಿಂಗ್, ಬಳಿಕ ತಮ್ಮ ಗನ್‌ಮ್ಯಾನ್‌ನ ಮೊಬೈಲ್‌ನಿಂದ ‘ನಮ್ಮ 100’ ಸಂಖ್ಯೆಗೆ ಕರೆ ಮಾಡಿ ಯುವತಿಯರಿಂದ ಮಾತನಾಡಿಸಿ ದೂರು ಕೊಡಿಸಿದ್ದಾರೆ. ಯುವತಿಯರು ಕರೆ ಮಾಡಿದ್ದ ಮೊಬೈಲ್ ಲೊಕೇಷನ್ ಆಧರಿಸಿ ಕೇವಲ ನಾಲ್ಕು ನಿಮಿಷದಲ್ಲಿ ಮೂವರು ಹೊಯ್ಸಳ ವಾಹನ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದಾರೆ.
ಹೊಯ್ಸಳ ಗಸ್ತು ವಾಹನ ಸ್ಥಳಕ್ಕೆ ಬರುವವರೆಗೂ ಚೇತನ್ ಸಿಂಗ್ ಸ್ಥಳದಲ್ಲೇ ಇದ್ದು, ಸಿಬ್ಬಂದಿಯ ಕರ್ತವ್ಯ ಪರಿಶೀಲಿಸಿದ್ದಾರೆ. ನಂತರ ಯುವತಿಯರನ್ನು ತಮ್ಮ ವಾಹನದಲ್ಲಿ ಕರೆದೊಯ್ದು ಬಿಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.