ಬೆಂಗಳೂರು: ದಾಸರಹಳ್ಳಿ ವಲಯದ ನೆಲಗೆದರನಹಳ್ಳಿ ಮುಖ್ಯರಸ್ತೆ ವಿಸ್ತರಣೆ ಕಾಮಗಾರಿಯನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಲು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚಿಸಿದರು.
‘ಮುಖ್ಯ ಆಯುಕ್ತರ ನಡೆ ವಲಯದ ಕಡೆ’ ಕಾರ್ಯಕ್ರಮದಡಿ ದಾಸರಹಳ್ಳಿ ವಲಯದ ವಿವಿಧ ಸ್ಥಳಗಳಲ್ಲಿ ಶುಕ್ರವಾರ ಪರಿಶೀಲನೆ ನಡೆಸಿದರು.
ಕಾಮಗಾರಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ‘ನೆಲಗೆದರನಹಳ್ಳಿ ರಸ್ತೆಯು ತುಮಕೂರು ಮುಖ್ಯ ರಸ್ತೆಯಿಂದ ಗಂಗಾ ಇಂಟರ್ ನ್ಯಾಷನಲ್ ಸ್ಕೂಲ್‌ವರೆಗೆ 2.45 ಕಿ.ಮೀ ಉದ್ದವಿದೆ. ಇದನ್ನು 60 ಅಡಿಗೆ ವಿಸ್ತರಣೆ ಮಾಡಲಾಗುತ್ತಿದೆ. 1.2 ಕಿ.ಮೀ ಉದ್ದದ ರಸ್ತೆ ವಿಸ್ತರಿಸಿ ಡಾಂಬರೀಕರಣ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಉಳಿದ ಕಾಮಗಾರಿಯನ್ನು 60 ದಿನದಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ’ ಎಂದು ತಿಳಿಸಿದರು.
173 ಮಂದಿಯ ಆಸ್ತಿಗಳಿಗೆ ಟಿಡಿಆರ್ ನೀಡಬೇಕಾಗಿತ್ತು. 16 ಮಂದಿಗೆ ಟಿಡಿಆರ್ ನೀಡಲಾಗಿದೆ. 85 ಮಂದಿ ದಾಖಲೆಗಳನ್ನು ಸಲ್ಲಿಸಿದ್ದು, ನಾಲ್ಕು ಆಸ್ತಿಗಳು ಸರ್ಕಾರಿ ಸ್ವತ್ತಾಗಿರುತ್ತವೆ ಎಂದರು.
ಅಬ್ಬಿಗೆರೆ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು. ಅಬ್ಬಿಗೆರೆ ಉದ್ಯಾನ ನಿರ್ವಹಣೆ ಮಾಡಬೇಕು ಎಂದು ಸೂಚಿಸಿದರು.
ಸ್ಥಗಿತಗೊಂಡಿದ್ದ ಒಣ ತ್ಯಾಜ್ಯ ಸಂಗ್ರಹಣಾ ಘಟಕ ಕಾಮಗಾರಿಯನ್ನು ಪುನರಾರಂಭಿಸಲು ನಿರ್ದೇಶನ ನೀಡಿದ ತುಷಾರ್ ಗಿರಿನಾಥ್, ದಾಸರಹಳ್ಳಿ ವಲಯದ ಅಬ್ಬಿಗೆರೆ ಅರಣ್ಯ ರಸ್ತೆಯ ವಿಸ್ತರಣೆ ಸಂದರ್ಭದಲ್ಲಿ ತೆರವು ಮಾಡಲಾಗಿರುವ ರುದ್ರಭೂಮಿಯ ಗೋಡೆಯನ್ನು ಮರು ನಿರ್ಮಿಸಲು ಗುತ್ತಿಗೆದಾರರಿಗೆ ಸೂಚಿಸಿದರು.
ವಲಯ ಆಯುಕ್ತ ಗಿರೀಶ್, ವಲಯ ಜಂಟಿ ಆಯುಕ್ತ ಪ್ರೀತಮ್ ನಸಲಾಪುರ್, ಮುಖ್ಯ ಎಂಜಿನಿಯರ್‌ಗಳಾದ ರವಿ, ವಿಜಯ್ ಕುಮಾರ್ ಹರಿದಾಸ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.