ಬೆಂಗಳೂರು: ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಬಳಸುವ ಗಡುವು ಬುಧವಾರ ಮುಗಿಯಲಿದ್ದು, ಗುರುವಾರದಿಂದ ಕ್ರಮಕೈಗೊಳ್ಳಲು ಬಿಬಿಎಂಪಿ ನಿರ್ಧರಿಸಿದೆ.
ಫೆಬ್ರುವರಿ 28ರಂದು ಹೊರಡಿಸಿದ್ದ ಸುತ್ತೋಲೆಯಂತೆಯೇ ಶೇ 60ರಷ್ಟು ಕನ್ನಡ ಬಳಸದ ವಾಣಿಜ್ಯ ಮಳಿಗೆಗಳ ‘ವ್ಯಾಪಾರ ಪರವಾನಗಿ’ ಅಮಾನತು ಮಾಡಿ, ಮಾರ್ಚ್ 14ರಿಂದ ಬೀಗ ಹಾಕಲಾಗುತ್ತದೆ. ಸರ್ಕಾರ, ಸ್ಥಳೀಯ ಪ್ರಾಧಿಕಾರಗಳಿಂದ ಅನುಮತಿ ಮತ್ತು ಮಂಜೂರಾತಿಯೊಂದಿಗೆ ಕಾರ್ಯ
ನಿರ್ವಹಿಸುತ್ತಿರುವ ವಾಣಿಜ್ಯ ಕೈಗಾರಿಕೆ ಮತ್ತು ವ್ಯವಹಾರ ಉದ್ಯಮಗಳು, ಟ್ರಸ್ಟ್‌ಗಳು, ಸಮಾಲೋಚನಾ ಕೇಂದ್ರಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನೋರಂಜನಾ ಕೇಂದ್ರಗಳು ಮತ್ತು ಹೋಟೆಲ್‌ಗಳ ನಾಮಫಲಕಗಳಲ್ಲಿ ಕನ್ನಡವನ್ನು ಶೇ 60ರಷ್ಟು ಪ್ರದರ್ಶಿಸಬೇಕು ಎಂದು ವಿಶೇಷ ರಾಜ್ಯ ಪತ್ರದಲ್ಲಿ ಸೂಚಿಸಲಾಗಿತ್ತು.
ವಾಣಿಜ್ಯ ಮಳಿಗೆಗಳು ಫೆಬ್ರುವರಿ 28ರೊಳಗೆ ನಾಮಫಲಕ ಗಳಲ್ಲಿ ಶೇ 60ರಷ್ಟು ಕನ್ನಡ ಅಳವಡಿಸಿ
ಕೊಳ್ಳಲು ಸೂಚಿಸಿ, 55,187 ಮಳಿಗೆಗಳಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಫೆಬ್ರುವರಿ 28ರ ವೇಳೆಗೆ 52,134 ವಾಣಿಜ್ಯ ಉದ್ದಿಮೆಗಳು ಸೂಚನೆಯನ್ನು ಪಾಲಿಸಿದ್ದವು. ಉಳಿದ 3,044 ವಾಣಿಜ್ಯ ಉದ್ದಿಮೆಗಳು ಯಾವುದೇ ಬದಲಾವಣೆ ಮಾಡಿಕೊಂಡಿರಲಿಲ್ಲ. ನಂತರ ಮಳಿಗೆ ಗಳ ಮಾಲೀಕರ ಮನವಿ ಮೇರೆಗೆ ಉಪ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗಡುವನ್ನು ಎರಡು ವಾರ ವಿಸ್ತರಿಸಿದ್ದರು.
‘ಮಾ.12ರಂತೆ 55,187 ಮಳಿಗೆ ಗಳಲ್ಲಿ 1,116 ಮಳಿಗೆಗಳು ನಾಮಫಲಕ ಗಳಲ್ಲಿ ಶೇ 60ರಷ್ಟು ಕನ್ನಡ
ಪ್ರದರ್ಶಿಸಿಲ್ಲ. ಮಾರ್ಚ್ 14ರಿಂದ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರೋಳ್ಕರ್ ವಿಕಾಸ್ ಕಿಶೋರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.