ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಕೊಲೆ ಆರೋಪಿ ಸೋಮಶೇಖರ್ ಅಲಿಯಾಸ್ ಸೋಮ ಎಂಬಾತ ಇನ್‌ಸ್ಟಾಗ್ರಾಂ ಅಪ್ಲಿಕೇಷನ್ ಮೂಲಕ ವಾಯ್ಸ್ ಮೆಸೇಜ್ ಕಳುಹಿಸಿ, ಸಾಕ್ಷ್ಯ ಹೇಳದಂತೆ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಆಟೊ ಚಾಲಕ ಆರ್ಮುಗಂ ದೂರು ನೀಡಿದ್ದಾರೆ.
ಈ ಸಂಬಂಧ ಸಿಸಿಬಿ ಪೊಲೀಸರು ಸೋಮಶೇಖರ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.
‘ಸೆಪ್ಟೆಂಬರ್ 23ರಂದು ಸಲಗ ಸೋಮ ಎಂಬ ಇನ್‌ಸ್ಟಾಗ್ರಾಂ ಖಾತೆಯಿಂದ ನನಗೆ ಮೂರು ವಾಯ್ಸ್ ಸಂದೇಶ ಬಂದಿದ್ದು, ಅದರಲ್ಲಿ ತಮಿಳು ಮತ್ತು ಕನ್ನಡ ಮಿಶ್ರಿತ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಜೋಸೆಫ್ ಬಾಬು ಅಲಿಯಾಸ್ ಬಬ್ಲಿ ಕೊಲೆ ಪ್ರಕರಣದಲ್ಲಿ ಯಾರೊಬ್ಬರೂ ನ್ಯಾಯಾಲಯದಲ್ಲಿ ಸಾಕ್ಷ್ಯ ಹೇಳಬಾರದು ಎಂದು ಬೆದರಿಸಿದ್ದಾರೆ’ ಎಂದು ಅರ್ಮುಗಂ ದೂರಿನಲ್ಲಿ ತಿಳಿಸಿದ್ದಾರೆ.
‘ಈ ವಿಷಯವನ್ನು ಬಬ್ಲಿ ಪತ್ನಿ, ಸುನಿಲ್ ಅಲಿಯಾಸ್ ಸುಂಡಿಲಿ, ಜಾರ್ಜ್ ಹಾಗೂ ನಾದನಿಗೂ ತಲುಪಿಸಬೇಕು. ನಮ್ಮ ಬಾಸ್ ಶಿವ ಹೇಳಿದಂತೆ ಕೇಳದಿದ್ದರೆ ಎಲ್ಲರನ್ನೂ ಹೊಡೆದು ಹಾಕುತ್ತೇವೆ. ರೌಡಿ ಮಿಲಿಟರಿ ಸತೀಶನನ್ನು ಹೊಡೆದು ಹಾಕಿದ್ದೇವೆ. ಅದೇ ರೀತಿ ಜೈಲಿನಿಂದಲೇ ಎಲ್ಲರನ್ನು ಹೊಡೆದು ಹಾಕುತ್ತೇವೆ. ಆಟೊ ಓಡಿಸುವ ನಿನ್ನನ್ನೂ ಮುಗಿಸುತ್ತೇವೆ ಎಂದು ನನಗೆ ಬೆದರಿಕೆ ಹಾಕಿದ್ದಾರೆ’ ಎಂದು ದೂರಿನಲ್ಲಿ ವಿವರಿಸಿದ್ದಾರೆ.
‘ನನ್ನ ಮೊಬೈಲ್‌ಗೆ ಬಂದ ಬೆದರಿಕೆ ಸಂದೇಶದಿಂದ ಭಯಗೊಂಡು ಆಟೊ ಓಡಿಸದೆ ಮನೆಯಲ್ಲಿಯೇ ಇದ್ದೆ. ಮೂರು ವರ್ಷಗಳ ಹಿಂದೆ ಕೋರಮಂಗಲದಲ್ಲಿ ಕೊಲೆಯಾದ ಜೋಸೆಫ್ ನನಗೆ ಪರಿಚಯ. ಸೋಮಶೇಖರ್ ಅಲಿಯಾಸ್ ಸೋಮ ಮತ್ತು ಸಹಚರರು ಜೈಲಿನಿಂದಲೇ ಸಂಚು ರೂಪಿಸಿ ಮಿಲಿಟರಿ ಸತೀಶ್ ಎಂಬುವರನ್ನು ಕೊಲೆ ಮಾಡಿಸಿದ್ದರು. ಆದ್ದರಿಂದ ನನಗೆ ಜೀವ ಭಯ ಇದ್ದು, ರಕ್ಷಣೆ ನೀಡಬೇಕು. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.
ವಾಯ್ಸ್ ಸಂದೇಶವುಳ್ಳ ಪೆನ್ ಡ್ರೈವ್ ಅನ್ನು ದೂರಿನ ಜೊತೆ ಲಗತ್ತಿಸಿದ್ದಾರೆ.
ನಟ ದರ್ಶನ್ ಮತ್ತು ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಹಾಗೂ ಸಹಚರರಿಗೆ ವಿಶೇಷ ಆತಿಥ್ಯ ನೀಡಿದ ಪ್ರಕರಣದಲ್ಲಿ ಜೈಲು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿತ್ತು. ಈ ಘಟನೆ ಬಳಿಕವೂ ಮೊಬೈಲ್ ಬಳಕೆ ಮುಂದುವರಿದಿರುವ ಅನುಮಾನ ಈ ಪ್ರಕರಣದಿಂದ ವ್ಯಕ್ತವಾಗಿದೆ.
ಸೆ.15ರಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ, ಶೋಧ ನಡೆಸಿದ್ದಾಗ 26 ಮೊಬೈಲ್ ಫೋನ್‌ಗಳು ಪತ್ತೆಯಾಗಿದ್ದವು. ಅದರ ಜಾಡು ಹಿಡಿದು ತನಿಖೆ ನಡೆಸಿದಾಗ ವಿಜಯ್ ಎಂಬ ಕೈದಿ ಮೊಬೈಲ್ ಫೋನ್ ಪೂರೈಸುತ್ತಿದ್ದ ಎಂಬುದು ಗೊತ್ತಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.