ಬೆಂಗಳೂರು: ಆಯುಷ್ ಇಲಾಖೆಯ ಮುಖ್ಯ ಆಡಳಿತಾಧಿಕಾರಿಗೆ ಕೊಲೆ ಬೆದರಿಕೆ ಹಾಕಿ, ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಡಿ ಜಯಚಾಮರಾಜೇಂದ್ರ ಆಯುರ್ವೇದ ಮತ್ತು ಯುನಾನಿ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ. ವೆಂಕಟರಾಮಯ್ಯ ಅವರನ್ನು ಸರ್ಕಾರ ಸೇವೆಯಿಂದ ಅಮಾನತುಗೊಳಿಸಿದೆ.
ಈ ಬಗ್ಗೆ ಆದೇಶ ಹೊರಡಿಸಿದ್ದು, ಕಳೆದ ಫೆ.6ರಂದು ಆಯುಷ್ ಇಲಾಖೆಯ ಮುಖ್ಯ ಆಡಳಿತಾಧಿಕಾರಿ ಎಸ್. ಶೈಲಜಾ ಅವರು ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಡಾ. ವೆಂಕಟರಾಮಯ್ಯ ಕೊಲೆ ಬೆದರಿಕೆ ಹಾಕಿದ್ದರು. ಫೆ.7ರಂದು ಅವರ ವಿರುದ್ಧ ಶೈಲಜಾ ಅವರು ಇಲಾಖೆ ಆಯುಕ್ತರಿಗೆ ದೂರು ಸಲ್ಲಿಸಿದ್ದರು.
ಮುಖ್ಯ ಆಡಳಿತಾಧಿಕಾರಿ ದೂರಿನ ಅನ್ವಯ ದಾಖಲೆಗಳನ್ನು ಪರಿಶೀಲಿಸಿದ ಆಯುಕ್ತರು, ಡಾ. ವೆಂಕಟರಾಮಯ್ಯ ಅವರು ಸರ್ಕಾರಿ ನೌಕರರಿಗೆ ಸಲ್ಲದ ರೀತಿಯಲ್ಲಿ ವರ್ತಿಸಿ, ನಾಗರಿಕ ಸೇವಾ (ನಡತೆ) ನಿಯಮ ಉಲ್ಲಂಘಿಸಿರುವುದು ಕಂಡು ಬಂದಿರುವುದಾಗಿ ವರದಿ ಸಲ್ಲಿಸಿದ್ದರು. ಅದರಂತೆ ಡಾ. ವೆಂಕಟರಾಮಯ್ಯ ವಿರುದ್ಧ ಇಲಾಖಾ ವಿಚಾರಣೆ ಬಾಕಿ ಇರಿಸಿ, ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಅಮಾನತು ಅವಧಿಯಲ್ಲಿ ನಿಯಮಾನುಸಾರ ಜೀವನಾಧಾರ ಭತ್ಯೆ ಪಡೆಯಲು ಅರ್ಹರಾಗಿರುತ್ತಾರೆ. ಈ ಅವಧಿಯಲ್ಲಿ ಸಕ್ಷಮ ಅಧಿಕಾರಿಯ ಅನುಮತಿ ಪಡೆಯದೇ ಕೇಂದ್ರ ಸ್ಥಾನ ಬಿಡಬಾರದು ಎಂದು ಸೂಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.