ಬೆಂಗಳೂರು: ಪಿಯುಸಿ ನಂತರದ ಅವಕಾಶಗಳು, ಸಿ.ಇ.ಟಿ ಕೌನ್ಸೆಲಿಂಗ್‌ಗೆ ಸಿದ್ಧತೆ ಹೇಗೆ? ಬೇಕಾಗುವ ದಾಖಲೆಗಳು ಯಾವು? ಎಂಜಿನಿಯರಿಂಗ್ ಕಾಲೇಜು ಆಯ್ಕೆ ಹೇಗೆ? ಯಾವ ಕಾಲೇಜು ಸೂಕ್ತ? ಆನ್‌ಲೈನ್‌ನಲ್ಲಿ ಕಾಮೆಡ್–ಕೆ ಪರೀಕ್ಷೆ ಎದುರಿಸುವುದು ಹೇಗೆ? ರಂಗಭೂಮಿ ಕ್ಷೇತ್ರದಲ್ಲಿರುವ ಅವಕಾಶಗಳು... – ಹೀಗೆ ಹತ್ತಾರು ಪ್ರಶ್ನೆಗಳಿಗೆ ಒಂದೇ ಸೂರಿನಡಿ ಉತ್ತರ ಲಭಿಸಿತು.
ನಗರದ ಅರಮನೆ ಮೈದಾನದಲ್ಲಿ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಆಯೋಜಿಸಿದ್ದ ‘ಎಡ್ಯುವರ್ಸ್’ ವಿದ್ಯಾರ್ಥಿಗಳ ದಾರಿದೀಪ ಕಾರ್ಯಕ್ರಮದ 2ನೇ ದಿನವಾದ ಭಾನುವಾರ ವಿದ್ಯಾರ್ಥಿಗಳು, ಅವರ ಪೋಷಕರ ಹತ್ತಾರು ಸಂದೇಹಗಳನ್ನು ಶಿಕ್ಷಣ ತಜ್ಞರು ಪರಿಹರಿಸಿದರು.
ಮಲ್ಲೇಶ್ವರದ ಸರ್ಕಾರಿ ಪಿಯು ಕಾಲೇಜು ಪ್ರಾಂಶುಪಾಲ ಎ.ಎಸ್.ರವಿ, ‘ಪಿಯು ಪರೀಕ್ಷೆಯಲ್ಲಿ ಅಂಕಗಳು ಕಡಿಮೆ ಬಂದಿದ್ದರೂ ಚಿಂತಿಸುವ ಅಗತ್ಯವಿಲ್ಲ. ಸಿಇಟಿ ಪರೀಕ್ಷೆ ಸಿದ್ಧತೆಗೆ ಇನ್ನೂ ಸಮಯವಿದೆ. ಸಿಇಟಿಯಲ್ಲಿ ಉತ್ತಮ ಅಂಕ ಪಡೆದರೆ ಎಲ್ಲ ಮೂಲಸೌಕರ್ಯ, ಗ್ರಂಥಾಲಯ, ಸಿಬ್ಬಂದಿ ಹೊಂದಿರುವ ರಾಜ್ಯದ ಉತ್ತಮ ಕಾಲೇಜಿನಲ್ಲಿಯೇ ಎಂಜಿನಿಯರಿಂಗ್ ಸೀಟು ಪಡೆಯಬಹುದು’ ಎಂದರು.
‘ಸಿಇಟಿ ರ್‍ಯಾಂಕಿಂಗ್ ಪ್ರಕಟವಾದ ಮೇಲೆ ಎಂಜಿನಿಯರಿಂಗ್, ವೆಟರ್ನರಿ ಸೈನ್ಸ್, ಅಗ್ರಿಸೈನ್ಸ್ ಮಾಡಬಹುದು. ದಾಖಲಾತಿಗಳನ್ನು ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡುವ ವೇಳೆ ಎಚ್ಚರಿಕೆ ವಹಿಸಬೇಕು. ಕಲ್ಯಾಣ ಕರ್ನಾಟಕ, ಗ್ರಾಮೀಣ ಹಾಗೂ ಕನ್ನಡ ಮಾಧ್ಯಮ ಪ್ರಮಾಣ ಪತ್ರ, ಪಿಯು ಅಂಕ ಪಟ್ಟಿ, ಏಳು ವರ್ಷದ ಅಧ್ಯಯನ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರಗಳನ್ನು ಸಿದ್ಧವಾಗಿ ಇಟ್ಟುಕೊಳ್ಳಬೇಕು. ಅಂತಿಮ ಕ್ಷಣದಲ್ಲಿ ಸರ್ವರ್ ಸಮಸ್ಯೆ ಕಾಡಲಿದೆ. ಆದ್ದರಿಂದ, ದಾಖಲಾತಿಗಳನ್ನು ಆದಷ್ಟು ಬೇಗ ಅಪ್‌ಲೋಡ್ ಮಾಡಬೇಕು’ ಎಂದು ಸಲಹೆ ನೀಡಿದರು.
‘ಸೀಟು ಆಯ್ಕೆ ವೇಳೆಯೂ ಎಚ್ಚರಿಕೆ ವಹಿಸಬೇಕು. ಎಲ್ಲ ಸೀಟುಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕವೇ ಪಡೆಯಬೇಕಾಗುತ್ತದೆ. ಇದು ಅತ್ಯಂತ ಪಾರದರ್ಶಕ ವ್ಯವಸ್ಥೆಯಾಗಿದೆ’ ಎಂದರು.
‘ನೀಟ್ ಪರೀಕ್ಷೆಯು ಅಖಿಲ ಭಾರತದ ಮಟ್ಟದಲ್ಲಿ ನಡೆಯಲಿದೆ. ಕೆಇಎ ಮೂಲಕವೇ ಸೀಟು ಹಂಚಿಕೆಯಾಗಲಿದೆ. ಒಳ್ಳೆಯ ರ್‍ಯಾಂಕ್ ಬಂದರೆ ಹೊರ ರಾಜ್ಯದಲ್ಲೇ ಸೀಟು ಸಿಗಲಿದೆ. ಎಂಬಿಬಿಎಸ್ ಸೀಟು ಸಿಕ್ಕರೆ ಎಂಜಿನಿಯರಿಂಗ್ ಸೀಟು ಬಿಟ್ಟು ತೆರಳಬಹುದು. ನಿಮ್ಮ ಹಿಂದಿನ ರ್‍ಯಾಂಕ್‌ನಲ್ಲಿರುವ ವಿದ್ಯಾರ್ಥಿಗೆ ಆ ಸೀಟು ದೊರೆಯಲಿದೆ’ ಎಂದರು.
ಕಾಮೆಡ್–ಕೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಎಸ್.ಕುಮಾರ್ ಮಾತನಾಡಿ, ‘ಕಾಮೆಡ್– ಕೆ ಪರೀಕ್ಷೆಯು ಪಾರದರ್ಶಕವಾಗಿ ನಡೆಯಲಿದೆ. ಮೆರಿಟ್ ಆಧರಿಸಿ ಸೀಟುಗಳು ದೊರೆಯಲಿವೆ. ಮಧ್ಯವರ್ತಿಗಳ ಮಾತು ನಂಬಿ ಮೋಸ ಹೋಗಬಾರದು’ ಎಂದು ಎಚ್ಚರಿಸಿದರು.
‘ರಾಜ್ಯದ 23 ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ 3,525, 27 ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ 4,595, 11 ಡೀಮ್ಡ್ ವಿ.ವಿಗಳಲ್ಲಿ 2,050 ಹಾಗೂ 7 ಖಾಸಗಿ ವಿ.ವಿಗಳಲ್ಲಿ 1,100 ಸೀಟುಗಳು ಲಭ್ಯವಿದೆ. ದೇಶದಲ್ಲಿ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳು ಸೇರಿದಂತೆ 1 ಲಕ್ಷಕ್ಕೂ ಹೆಚ್ಚು ಎಂಬಿಬಿಎಸ್ ಸೀಟುಗಳಿವೆ. ದೇಶದಲ್ಲಿ 3 ಸಾವಿರ ಎಂಜಿನಿಯರಿಂಗ್ ಕಾಲೇಜಿನಲ್ಲಿ 13.56 ಲಕ್ಷ ಎಂಜಿನಿಯರಿಂಗ್ ಸೀಟ್‌ಗಳಿವೆ. ಆದರೂ, ಪ್ರತಿ ವರ್ಷ ಪ್ರವೇಶಕ್ಕೆ ವಿದ್ಯಾರ್ಥಿಗಳು ಪರದಾಡುವ ಸ್ಥಿತಿಯಿದೆ’ ಎಂದು ಹೇಳಿದರು.
ಕಡಿಮೆ ವೆಚ್ಚದಲ್ಲೂ ವೈದ್ಯಕೀಯ ಶಿಕ್ಷಣ
‘ವೈದ್ಯರಾಗುವುದು ಸೇವೆ ಮಾಡುವುದಕ್ಕೇ ಹೊರತು, ಹಣ ಗಳಿಸುವುದಕ್ಕೆ ಅಲ್ಲ. ವೈದ್ಯ ವೃತ್ತಿಯು ಮನಸ್ಸಿಗೆ ತೃಪ್ತಿ ನೀಡುವ ಉತ್ತಮ ಕೆಲಸಗಳಲ್ಲಿ ಒಂದಾಗಿದೆ. ವೈದ್ಯನಾದವನು ರೋಗಿಗಳ ಬಗ್ಗೆ ಸಹಾನೂಭೂತಿ ಹೊಂದಿರಬೇಕು. ಯಾರೇ ಬಂದರೂ ಅತ್ಯುತ್ತಮವಾದ ಚಿಕಿತ್ಸೆ ಕೊಡುವತ್ತ ಗಮನ ಹರಿಸಬೇಕು’ ಎಂದು ಮಣಿಪಾಲ್ ಆಸ್ಪತ್ರೆಯ ಡಾ.ರಂಜನ್ ಶೆಟ್ಟಿ ಅಭಿಪ್ರಾಯಪಟ್ಟರು.
‘ವೈದ್ಯಕೀಯ ಕ್ಷೇತ್ರದಲ್ಲಿ ಅವಕಾಶಗಳು’ ಕುರಿತು ಮಾತನಾಡಿ, ‘ಎಂಎಂಬಿಎಸ್ ಮಾಡಿದ ಬಳಿಕ ಅವಕಾಶಗಳ ಬಾಗಿಲು ತೆರೆದುಕೊಳ್ಳಲಿವೆ. ಉತ್ತಮ ಅಂಕ ಗಳಿಸಿದರೆ ಕಡಿಮೆ ವೆಚ್ಚದಲ್ಲಿ ಎಂಬಿಬಿಎಸ್ ಪೂರ್ಣಗೊಳಿಸುವುದಕ್ಕೆ ಅವಕಾಶಗಳಿವೆ. ವೃತ್ತಿ ಆರಂಭಿಸಿದ ಮೇಲೂ ಬೇಸರ ಪಟ್ಟುಕೊಳ್ಳದೇ ಸೇವಾ ಮನೋಭಾವದ ಜತೆಗೆ ಕೆಲಸ ಮಾಡಬೇಕು’ ಎಂದು ಕರೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.