ಬೆಂಗಳೂರು: ‘ದಶಕಗಳ ಹಿಂದೆ ನಗರದಲ್ಲಿ 400 ಕೆರೆಗಳಿದ್ದವು. ಈಗ ಅವುಗಳ ಸಂಖ್ಯೆ 227ಕ್ಕೆ ಇಳಿದಿದೆ. ಉಳಿದಿರುವ ಕೆರೆಗಳ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ’ ಎಂದು ವಿಜ್ಞಾನ ಲೇಖಕ ನಾಗೇಶ ಹೆಗಡೆ ಹೇಳಿದರು.
ನಗರದ ಗಾಂಧಿ ಭವನದಲ್ಲಿ ಆಕ್ಷನ್‌ಏಡ್ ಅಸೋಸಿಯೇಷನ್ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೊರೆಕೆರೆ ಜೀವ ವೈವಿಧ್ಯತೆಯ ವರದಿ ಬಿಡುಗಡೆ ಮಾಡಿ ಮಾತನಾಡಿದರು.
ಕೆಲವು ಕೆರೆಗಳು ಬಿಬಿಎಂಪಿ, ಕಂದಾಯ ಇಲಾಖೆ, ಬಿಡಿಎ ಸುಪರ್ದಿಯಲ್ಲಿವೆ. ಇನ್ನು ಕೆಲವು ಕೆರೆಗಳು ಯಾರ ಸುಪರ್ದಿಯಲ್ಲಿವೆ ಎಂಬುದೇ ಗೊತ್ತಿಲ್ಲ. ನಾನಾ ಕಾರಣಗಳಿಂದ ನೈಸರ್ಗಿಕ ಜಲಧಾಮ ದುರ್ಗತಿಗೆ ಬಂದಿವೆ. ಕೆರೆಗಳಿಗೆ ತ್ಯಾಜ್ಯ ಸುರಿಯುವುದು, ಆಟದ ಮೈದಾನ ಮಾಡಿಕೊಳ್ಳುವುದು ಹಾಗೂ ಬಹುಮಹಡಿ ಕಟ್ಟಡ ನಿರ್ಮಿಸುವ ಮೂಲಕ ನಾಶ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕದ ವಿಜಯನಗರ ಜಿಲ್ಲೆಯ ಅಂಕಸಮುದ್ರ ಪಕ್ಷಿ ಸಂರಕ್ಷಣಾ ಮೀಸಲು ಪ್ರದೇಶ, ಗದಗ ಜಿಲ್ಲೆಯ ಮಾಗಡಿ ಕೆರೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಅಘನಾಶಿನಿ ನದಿಮುಖಜ ಪ್ರದೇಶ (ಅಳಿವೆ) ಹಾಗೂ ರಂಗನತಿಟ್ಟು ಪಕ್ಷಿಧಾಮ. ಈ ನಾಲ್ಕು ಜೌಗು ಪ್ರದೇಶಗಳು ‘ರಾಮ್‌ಸರ್’ ಪಟ್ಟಿಗೆ ಸೇರಿವೆ. ನೈಸರ್ಗಿಕವಾಗಿ ರೂಪುಗೊಂಡ ಜೌಗು ಪ್ರದೇಶಗಳಿಗೆ ಅಂತರರಾಷ್ಟ್ರೀಯ ಮಾನ್ಯತೆ ನೀಡಲಾಗುತ್ತಿದ್ದು, ಅಂತಹ ಪ್ರದೇಶಗಳನ್ನು ‘ರಾಮ್‌ಸರ್’ ತಾಣಗಳೆಂದು ಗುರುತಿಸಲಾಗುತ್ತದೆ ಎಂದು ಹೇಳಿದರು.
ಆಸ್ಟ್ರೇಲಿಯಾದ ಜನಸಂಖ್ಯೆ ಕರ್ನಾಟಕಕ್ಕಿಂತ ಕಡಿಮೆ. ಅಲ್ಲಿ 67 ಜೌಗು ಪ್ರದೇಶಗಳು ಹಾಗೂ ಇಂಗ್ಲೆಂಡ್‌ನಲ್ಲಿ 175 ಜೌಗು ಪ್ರದೇಶಗಳು ರಾಮ್‌ಸರ್ ಪಟ್ಟಿಗೆ ಸೇರಿವೆ. ಬಿಬಿಎಂಪಿ, ಅರಣ್ಯ ಇಲಾಖೆ, ಕಂದಾಯ ಇಲಾಖೆ, ಪಂಚಾಯಿತಿಗಳು ಹಾಗೂ ಜನಪ್ರತಿನಿಧಿಗಳು ಕೆರೆಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದರು.
ಜಲಪೋಷಣ್ ನಿರ್ದೇಶಕಿ ಅನ್ನಪೂರ್ಣ ಮಾತನಾಡಿ, ಸಾವಿರ ಕೆರೆಗಳ ನಾಡು ಎನಿಸಿಕೊಂಡಿದ್ದ ಬೆಂಗಳೂರಿನಲ್ಲಿ ಬೆರಳೆಣಿಕೆಯಷ್ಟು ಕೆರೆಗಳು ಜೀವಂತವಾಗಿ ಉಳಿದಿವೆ. ನಗರ ಹಾಗೂ ಸುತ್ತಮುತ್ತ ಸೇರಿ 300 ಕೆರೆಗಳಿದ್ದು, ಅವುಗಳ ರಕ್ಷಣೆಗೆ ಆದ್ಯತೆ ನೀಡಬೇಕು ಎಂದರು.
ಬಿಬಿಎಂಪಿ (ಕೆರೆ ವಿಭಾಗ) ಕಾರ್ಯನಿರ್ವಾಹಕ ಎಂಜಿನಿಯರ್ ಇಂದ್ರಾಣಿ ಮಾತನಾಡಿ, ಕೆರೆಗಳ ಸಂರಕ್ಷಣೆಗೆ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಅರಣ್ಯ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಸತೀಶ್ ಮಾತನಾಡಿ, ಜಾಗತಿಕ ತಾಪಮಾನ ಕಡಿಮೆ ಮಾಡಲು ಕಳೆದ ವರ್ಷ ರಾಜ್ಯದಲ್ಲಿ 5.41 ಕೋಟಿ ಸಸಿಗಳನ್ನು ನೆಡಲಾಯಿತು. ರಾಜ್ಯದಲ್ಲಿ 16,700 ಜೌಗು ಪ್ರದೇಶಗಳನ್ನು ಗುರುತಿಸಲಾಗಿದ್ದು, ನಾಲ್ಕು ರಾಮ್‌ಸರ್ ಪಟ್ಟಿಗೆ ಸೇರಿವೆ ಎಂದರು.
ಆಸ್ಟ್ರೇಲಿಯಾದ ಕಾನ್ಸುಲೇಟ್ ಜನರಲ್ ಕಾನ್ಸುಲ್ ಆಂಡ್ರ್ಯೂ ಕೊಲಿಸ್ಟರ್, ಲೇಖಕಿ ಶೋಭಾ ನಾರಾಯಣ್, ಆಕ್ಷನ್‌ಏಯ್ಡ್ ಅಸೋಸಿಯೇಷನ್‌ನ ನಂದಿನಿ ಹಾಜರಿದ್ದರು. ರಾಘವೇಂದ್ರ ವಂದಿಸಿದರು.
ದೊರೆಕೆರೆ: ನಗರದ ಉತ್ತರಹಳ್ಳಿಯ ದೊರೆಕೆರೆ 28 ಎಕರೆ ಪ್ರದೇಶ ವ್ಯಾಪ್ತಿಯಲ್ಲಿದ್ದು, 230 ಜಾತಿಯ ಮರಗಳು, ಹಲವು ಜಾತಿಯ ಪಕ್ಷಿಗಳು, ಚಿಟ್ಟೆಗಳಿಗೆ ನೆಲೆಯಾಗಿದೆ. ವಿದ್ಯಾರ್ಥಿಗಳು, ಯುವಜನರು ಮತ್ತು ಸ್ಥಳೀಯರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಒಟ್ಟು 768 ಮರಗಳನ್ನು ಗುರುತಿಸಲಾಗಿದೆ ಎಂದು ಆಕ್ಷನ್ ಏಡ್ ಅಸೋಸಿಯೇಷನ್ ಸಮೀಕ್ಷೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.