ADVERTISEMENT

ಡೀಮ್ಡ್ ಅರಣ್ಯ | ಜಂಟಿ ಸರ್ವೆ: ಗೊಂದಲ ಪರಿಹಾರಕ್ಕೆ ಕಂದಾಯ ಇಲಾಖೆ ಸುತ್ತೋಲೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2024, 16:16 IST
Last Updated 17 ಫೆಬ್ರುವರಿ 2024, 16:16 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಪರಿಭಾವಿತ (ಡೀಮ್ಡ್‌) ಅರಣ್ಯ ಪ್ರದೇಶಕ್ಕೆ ಸಂಬಂಧಿಸಿದಂತೆ ಗೊಂದಲಗಳಿರುವ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಾಹಿತಿ ಪ್ರಕಟಿಸಿ, ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಜಂಟಿ ಸರ್ವೆ ನಡೆಸಿ ವಿವಾದ ಇತ್ಯರ್ಥಪಡಿಸಲು ಸರ್ಕಾರ ಮುಂದಾಗಿದೆ.

ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್‌ ಕುಮಾರ್‌ ಕಟಾರಿಯಾ ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ.

ADVERTISEMENT

ರಾಜ್ಯದಲ್ಲಿ ಡೀಮ್ಡ್‌ ಅರಣ್ಯ ಪ್ರದೇಶಗಳನ್ನು ಗುರುತಿಸಲು ನೇಮಿಸಿದ್ದ ಪುನರ್‌ ರಚಿತ ತಜ್ಞರ ಸಮಿತಿ–1 9,94,881.11 ಹೆಕ್ಟೇರ್‌ ವಿಸ್ತೀರ್ಣದ ಡೀಮ್ಡ್‌ ಅರಣ್ಯ ಪ್ರದೇಶಗಳಿವೆ ಎಂದು ವರದಿ ಸಲ್ಲಿಸಿತ್ತು. ಈ ವರದಿಯಲ್ಲಿ ಲೋಪಗಳಿವೆ ಎಂದು ಅದರ ಪರಿಶೀಲನೆಗಾಗಿ ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ಜಂಟಿ ಸಮಿತಿ ರಚಿಸಲಾಗಿತ್ತು.

ಜಂಟಿ ಸಮಿತಿ ಪರಿಶೀಲನೆ ಬಳಿಕ 2022ರ ಫೆಬ್ರುವರಿ 5ರಂದು ಆದೇಶ ಹೊರಡಿಸಿದ್ದ ಅರಣ್ಯ ಇಲಾಖೆ, ಒಟ್ಟು 3,30,186.93 ಹೆಕ್ಟೇರ್‌ ಪ್ರದೇಶವನ್ನು ಮಾತ್ರ ಡೀಮ್ಡ್ ಅರಣ್ಯ ಎಂದು ಘೋಷಿಸಿತ್ತು. ತಜ್ಞರ ಸಮಿತಿ–1 ಗುರುತಿಸಿದ್ದ ಪಟ್ಟಿಯಿಂದ 7,73,326.91 ಹೆಕ್ಟೇರ್‌ ಪ್ರದೇಶಗಳನ್ನು ಹೊರಗಿಡಲು ನಿರ್ಧರಿಸಲಾಗಿತ್ತು.

3,30,186.93 ಹೆಕ್ಟೇರ್‌ ವಿಸ್ತೀರ್ಣದ ಡೀಮ್ಡ್‌ ಅರಣ್ಯ ಪ್ರದೇಶಗಳ ಪಟ್ಟಿಗೂ ಹಲವೆಡೆ ತಕರಾರುಗಳಿವೆ. ಹೀಗಾಗಿ, ಗೊಂದಲ ಪರಿಹಾರಕ್ಕೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಾಹಿತಿ ಪ್ರಕಟಿಸಿ, ಅಹವಾಲು ಆಲಿಸಿ ತೀರ್ಮಾನ ಕೈಗೊಳ್ಳಲು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಶುಕ್ರವಾರ ಹೊರಡಿಸಿರುವ ಸುತ್ತೋಲೆಯಲ್ಲಿ ಸೂಚಿಸಿದ್ದಾರೆ.

2022ರ ಫೆ.5ರ ಆದೇಶದಲ್ಲಿ ಅರಣ್ಯ ಇಲಾಖೆ ಪ್ರಕಟಿಸಿರುವ ಡೀಮ್ಡ್‌ ಅರಣ್ಯಗಳ ಪಟ್ಟಿಯನ್ನು ಪಡೆದು, ಜಿಲ್ಲಾಧಿಕಾರಿ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ದೃಢೀಕರಣದೊಂದಿಗೆ ಗ್ರಾಮ ಪಂಚಾಯಿತಿಗಳಲ್ಲಿ ಪ್ರಕಟಿಸಬೇಕು. ಸಂಪೂರ್ಣ ಸರ್ವೆ ನಂಬರ್‌ಗಳು ಡೀಮ್ಡ್‌ ಅರಣ್ಯ ಪ್ರದೇಶವಾಗಿದ್ದಲ್ಲಿ, ಯಾವುದೇ ವಿವಾದಗಳು ಇಲ್ಲದಿದ್ದರೆ ತಾಲ್ಲೂಕು ಮಟ್ಟದಲ್ಲಿ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸಮಾಲೋಚಿಸಿ ಕಂದಾಯ ಇಲಾಖೆಯ ದಾಖಲೆಗಳಲ್ಲಿ ‘ಡೀಮ್ಡ್‌ ಅರಣ್ಯ’ ಎಂಬುದಾಗಿ ಇಂಡೀಕರಣ ಮಾಡಬೇಕು ಎಂದು ಸುತ್ತೋಲೆಯಲ್ಲಿ ನಿರ್ದೇಶನ ನೀಡಲಾಗಿದೆ.

ಭಾಗಶಃ ಡೀಮ್ಡ್‌ ಅರಣ್ಯ ಪ್ರದೇಶವಿರುವ ಸರ್ವೆ ಸಂಖ್ಯೆ ಅಥವಾ ಅದಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್‌ಗಳಲ್ಲಿ ಗೊಂದಲಗಳಿದ್ದರೆ ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಸರ್ವೆ ನಡೆಸಬೇಕು. ಆ ಬಳಿಕ ಕಂದಾಯ ಇಲಾಖೆಯು ಮುಂದಿನ ಕ್ರಮಕ್ಕಾಗಿ ಅರಣ್ಯ ಇಲಾಖೆಗೆ ಪ್ರಸ್ತಾವ ಕಳುಹಿಸಬೇಕು ಎಂದು ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.