ಬೆಂಗಳೂರು: ದೀಪಾವಳಿ ಹಬ್ಬದ ಅಂಗವಾಗಿ ನಗರದ ವಿವಿಧ ಸ್ಥಳಗಳಲ್ಲಿ ಪಟಾಕಿಯನ್ನು ಅಕ್ರಮವಾಗಿ ಮಾರಾಟ ಹಾಗೂ ದಾಸ್ತಾನು ಮಾಡಲಾಗಿದ್ದು, ಅಂತಹ ವರ್ತಕರಿಗೆ ನಗರ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ.
ತಳ್ಳುಗಾಡಿ, ರಸ್ತೆ ಬದಿ ಹಾಗೂ ಗೂಡಂಗಡಿಗಳಲ್ಲಿ ಪಟಾಕಿ ಮಾರಾಟ ಮಾಡುತ್ತಿರುವುದು ಕಂಡುಬಂದಿದ್ದು, ಪಟಾಕಿ ಜಪ್ತಿ ಮಾಡಿಕೊಳ್ಳಲಾಗಿದೆ. ಅಲ್ಲದೇ, 56ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.
‘ಪಟಾಕಿ ಮಾರಾಟಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ದೊಡ್ಡ ಸಂಖ್ಯೆಯಲ್ಲಿ ಅರ್ಜಿಗಳು ಬಂದಿದ್ದವು. ನಗರದ 72 ಮೈದಾನಗಳಲ್ಲಿ ತಾತ್ಕಾಲಿಕವಾಗಿ ಪಟಾಕಿ ಮಾರಾಟಕ್ಕೆ 315 ಪರವಾನಗಿ ನೀಡಲಾಗಿದೆ. ಆದರೆ, ಪರವಾನಗಿ ಪಡೆಯದ ಕೆಲವರು ರಸ್ತೆಬದಿ ಹಾಗೂ ತಳ್ಳುಗಾಡಿಗಳಲ್ಲಿ ಪಟಾಕಿ ಮಾರಾಟ ನಡೆಸುತ್ತಿರುವುದು ಕಂಡುಬಂದಿದೆ. ಅಂತಹವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಉತ್ತರ ವಿಭಾಗದಲ್ಲಿ 9, ದಕ್ಷಿಣ 4, ಪೂರ್ವ 6, ಈಶಾನ್ಯ 19, ಆಗ್ನೇಯ 9, ವೈಟ್‌ಫೀಲ್ಡ್ 9 ಸೇರಿದಂತೆ ಒಟ್ಟು 56 ಪ್ರಕರಣಗಳು ದಾಖಲಾಗಿವೆ. ಶನಿವಾರ ಹಾಗೂ ಭಾನುವಾರ ಸಹ ಕಾರ್ಯಾಚರಣೆ ನಡೆಸಲಾಗುವುದು’ ಎಂದು ಪೊಲೀಸರು ಹೇಳಿದರು.
ನಿಯಮ ಉಲ್ಲಂಘನೆ: ಹಸಿರು ಪಟಾಕಿ ಸಿಡಿಸಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ರಾತ್ರಿ 8ರಿಂದ 10ವರೆಗೆ ಮಾತ್ರ ಪಟಾಕಿ ಸಿಡಿಸಲು ಅನುಮತಿ ನೀಡಲಾಗಿದೆ. ಆದರೆ, ಹಗಲು ವೇಳೆಯಲ್ಲೂ ಪಟಾಕಿ ಸಿಡಿಸಲಾಗಿದ್ದು, ಅಂತಹವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.