ಬೆಂಗಳೂರು: ದೀಪಗಳ ಹಬ್ಬ ದೀಪಾವಳಿ ನಗರದಲ್ಲಿ ಗುರುವಾರ ಆರಂಭವಾಯಿತು. ನರಕ ಚತುರ್ದಶಿಯ ದಿನ ಮನೆಗಳನ್ನು ದೀಪಗಳಿಂದ, ಹೂವುಗಳಿಂದ ಅಲಂಕರಿಸಿ, ಮನೆ ಮುಂದೆ ಬಣ್ಣ ಬಣ್ಣದ ರಂಗೋಲಿ ಹಾಕಿ ಹಬ್ಬಕ್ಕೆ ಸ್ವಾಗತ ನೀಡಲಾಯಿತು. ಎಣ್ಣೆ ಸ್ನಾನ ಮಾಡಿ, ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.
ಗುರುವಾರ ಮೊದಲ ದಿನವಾಗಿದ್ದು, ಶುಕ್ರವಾರ ಕರಿ ದಿನ. ಮೊದಲ ದಿನ ಎಣ್ಣೆಸ್ನಾನ, ಪೂಜೆ ಪುನಸ್ಕಾರಗಳಿಗೆ ಒತ್ತು ನೀಡಿದರೆ, ಎರಡನೇ ದಿನ ಲಕ್ಷ್ಮೀ ಪೂಜೆ ನಡೆಸಲಾಗುತ್ತದೆ. ಮೂರನೇ ದಿನ ಬಲಿಪಾಡ್ಯಮಿ ಆಚರಿಸಲಾಗುತ್ತದೆ.
ಕಂದೀಲು ಆಕಾರದ ಆಕಾಶ ಬುಟ್ಟಿಗಳು, ಕೋಮಲ್ ಡಿಸೈನ್, ಗುಲಾಬ್ ರಂಗೀಲಾ, ಚಂದ್ರನ ಆಕಾರದ ಆಕಾಶ ಬುಟ್ಟಿ ಹೀಗೆ ನಾನಾ ತರಹದ ಆಕಾಶ ಬುಟ್ಟಿಗಳನ್ನು ನಗರದ ಮನೆ ಮನೆಗಳಲ್ಲಿ ನೇತು ಹಾಕಿ ಅದಕ್ಕೆ ವಿದ್ಯುತ್ ದೀಪದ ಬೆಳಕು ಹರಿಸಲಾಗಿತ್ತು.
ಗುರುವಾರ ಕತ್ತಲು ಆವರಿಸುತ್ತಿದ್ದಂತೆ ಮಣ್ಣಿನ ಹಣತೆಗಳನ್ನು ಹಚ್ಚಲಾಯಿತು. ದೇವರ ಮಂಟಪಗಳಿಗೆ ಹೂವು, ಬಾಳೆ ಕಂದುಗಳಿಂದ ವಿಶೇಷ ಅಲಂಕಾರ ಮಾಡಿ ಪೂಜಿಸಲಾಯಿತು.
ಕೆಲವರು ಆಯುಧ ಪೂಜೆ ಸಂದರ್ಭದಲ್ಲಿ ವಾಹನಗಳಿಗೆ ಪೂಜೆ ಮಾಡದೇ ದೀಪಾವಳಿಯಲ್ಲಿ ಪೂಜೆ ಮಾಡುವ ಸಂಪ್ರದಾಯ ಇಟ್ಟುಕೊಂಡಿದ್ದು, ಅವರು ಗುರುವಾರ ವಾಹನಗಳನ್ನು ಸ್ವಚ್ಛಗೊಳಿಸಿ ಅಲಂಕಾರ ಮಾಡಿ, ಕುಂಬಳಕಾಯಿ ಒಡೆದು ಪೂಜೆ ಸಲ್ಲಿಸಿದರು. ಕೆಲವರು ಈ ಪೂಜೆಯನ್ನು ಶುಕ್ರವಾರ ಇಟ್ಟುಕೊಂಡಿದ್ದು, ಗುರುವಾರ ವಾಹನಗಳನ್ನು ತೊಳೆದಿಟ್ಟರು.
ಕೆಲವು ಮನೆಗಳಲ್ಲಿ ಗುರುವಾರವೇ ಲಕ್ಷ್ಮೀ ಪೂಜೆ ನಡೆದರೆ, ವ್ಯಾಪಾರಿ ಕುಟುಂಬಗಳಲ್ಲಿ ಶುಕ್ರವಾರ ಪೂಜೆ ನಡೆಯಲಿದೆ. ಅದಕ್ಕಾಗಿ ಅಂಗಡಿಗಳನ್ನು ಹೂವು, ವಿದ್ಯುತ್ ದೀಪಗಳಿಂದ ಅಲಂಕರಿಸಿದರು.
ಪಟಾಕಿ ಸದ್ದು: ಗುರುವಾರ ಬೆಳಿಗ್ಗೆಯಿಂದಲೂ ನಗರದಲ್ಲಿ ಪಟಾಕಿ ಸದ್ದು ಜೋರಾಗಿತ್ತು. ರಾತ್ರಿ ವಿವಿಧ ಪೂಜೆಗಳ ಬಳಿಕ ಮಕ್ಕಳ ಜೊತೆಗೆ ಯುವಕರು, ವಯಸ್ಕರೂ ಸೇರಿಕೊಂಡು ಪಟಾಕಿ ಸಿಡಿಸಿದರು.
ಮಳೆಯ ಸಿಂಚನ: ಗುರುವಾರ ನಗರದಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.