ಬೆಂಗಳೂರು: ಆನ್‌ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಉದ್ಯಮಿಗಳ ಹೆಸರು ಹಾಗೂ ಅವರದ್ಧೇ ಶೈಲಿಯ ಧ್ವನಿ (ಡೀಪ್ ಫೇಕ್) ಬಳಸಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸೈಬರ್ ವಂಚಕರು ಮಹಿಳೆ ಮತ್ತು ನಿವೃತ್ತ ನೌಕರರೊಬ್ಬರಿಗೆ ₹86 ಲಕ್ಷ ವಂಚಿಸಿದ್ದಾರೆ.
ಈ ಸಂಬಂಧ ಸೈಬರ್ ಅಪರಾಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇನ್ಪೊಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಹಾಗೂ ರಿಲಯನ್ಸ್ ಕಂಪನಿಯ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು ‘ಎಫ್‌ಎಕ್ಸ್ ರೋಡ್.ಕಾಂ’ ಟ್ರೇಡಿಂಗ್ ಬಗ್ಗೆ ಮಾಹಿತಿ ನೀಡಿದಂತೆ ಫೇಸ್‌ಬುಕ್‌ನಲ್ಲಿ ಸೈಬರ್ ಕಳ್ಳರು ಪೋಸ್ಟ್ ಪ್ರಕಟಿಸಿದ್ದರು. ಅದನ್ನು ಗಮನಿಸಿದ್ದ ನಿವೃತ್ತ ನೌಕರರೊಬ್ಬರು ಹಣ ಕಳೆದುಕೊಂಡಿದ್ದಾರೆ.
‘ವ್ಯವಸ್ಥಾಪಕರೊಬ್ಬರ ಸೋಗಿನಲ್ಲಿ ಸೈಬರ್ ವಂಚಕನೊಬ್ಬ ಮೇ 30ರಂದು ಕರೆ ಮಾಡಿ ಲಿಂಕ್ ಕಳುಹಿಸಿದ್ದ. ಆ ಲಿಂಕ್ ಮೂಲಕ ನಿವೃತ್ತ ನೌಕರರೊಬ್ಬರು ಹೂಡಿಕೆ ಖಾತೆ ತೆರೆದಿದ್ದರು. ಲಾಭದ ಆಸೆಯಿಂದ ಅವರು ಮೂರು ಬ್ಯಾಂಕ್ ಖಾತೆಗಳಿಂದ ಮೇ 30ರಿಂದ ಅಕ್ಟೋಬರ್ 3ರ ಮಧ್ಯೆ ಒಟ್ಟು ₹19 ಲಕ್ಷ ಹೂಡಿಕೆ ಮಾಡಿದ್ದರು. ಹೂಡಿಕೆ ಮಾಡಿದ್ದ ಹಣಕ್ಕೆ ಯಾವುದೇ ಕಮಿಷನ್ ನೀಡಿಲ್ಲ. ಅಲ್ಲದೇ ಅಸಲು ಸಹ ನೀಡದೇ ಮೋಸ ಮಾಡಲಾಗಿದೆ’ ಎಂದು ದೂರು ನೀಡಲಾಗಿದೆ.
₹67 ಲಕ್ಷ ವಂಚನೆ: ಮಹಿಳೆಯೊಬ್ಬರಿಗೆ ಸೆಪ್ಟೆಂಬರ್ 23ರಂದು ಫೇಸ್‌ಬುಕ್‌ನಲ್ಲಿ ‘ಎಫ್‌ಎಕ್ಸ್ ರೋಡ್ ಪ್ಲಾಟ್‌ಫಾರಂ’ ಟ್ರೇಡಿಂಗ್ ಬಗ್ಗೆ ಎನ್.ಆರ್. ನಾರಾಯಣ ಮೂರ್ತಿ ಅವರು ಮಾತನಾಡಿದಂತೆಯೇ ಮಾಹಿತಿ ನೀಡಲಾಗಿತ್ತು. ನಂತರ, ಅಪರಿಚಿತ ವ್ಯಕ್ತಿಯೊಬ್ಬ ದೂರುದಾರರಾದ ಕೆ.ಜಿ.ವೀಣಾ ಅವರಿಗೆ ಇ–ಮೇಲ್ ಮೂಲಕ ಮಾಹಿತಿ ನೀಡಿ, ಪ್ಲಾಟ್‌ಫಾರಂನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದೆಂದು ಆಮಿಷವೊಡ್ಡಿದ್ದ’ ಎಂದು ಪೊಲೀಸರು ತಿಳಿಸಿದರು.
‘ಸೈಬರ್ ವಂಚಕರ ಮಾತು ನಂಬಿದ್ದ ವೀಣಾ ಅವರು ಕೆನರಾ ಬ್ಯಾಂಕ್ ಖಾತೆಯಿಂದ ₹1.39 ಲಕ್ಷ ಹೂಡಿಕೆ ಮಾಡಿದ್ದರು. ಆ ಹಣಕ್ಕೆ ಆರಂಭದಲ್ಲಿ ₹8,363 ಲಾಭಾಂಶವನ್ನು ವಂಚಕರು ನೀಡಿದ್ದರು. ಇದನ್ನೇ ನಂಬಿದ್ದ ಮಹಿಳೆ ಹಂತಹಂತವಾಗಿ ₹67 ಲಕ್ಷ ಹೂಡಿಕೆ ಮಾಡಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
‘ಹೂಡಿಕೆ ಮಾಡಿದ ಹಣಕ್ಕೆ ₹ 55,997 ಮಾತ್ರ ವಾಪಸ್ ನೀಡಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಬಿಎನ್‌ಎಸ್ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಸೈಬರ್ ಅಪರಾಧ ವಿಭಾಗದ ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.