ಬೆಂಗಳೂರು: ಇಲ್ಲಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಇತ್ತೀಚೆಗೆ ಆತಂಕ ಸೃಷ್ಟಿಸಿದ್ದ ಗ್ರೆನೇಡ್ ಮಾದರಿ ವಸ್ತು ಝಾನ್ಸಿಗೆ ಹೊರಟಿದ್ದು, ಇದರ ಜೊತೆಯಲ್ಲಿದ್ದ ಪಾರ್ಸಲ್‌ನಲ್ಲಿದ್ದ ಮಿಕ್ಕ ಸಿಮ್ಯುಲೇಟರ್ ಗ್ರೆನೇಡ್‌ಗಳು ನಾಪತ್ತೆಯಾಗಿವೆ!
ಈ ಸಿಮ್ಯುಲೇಟರ್ ಹ್ಯಾಂಡ್ ಗ್ರೆನೇಡ್‌ಗಳನ್ನು ರೈಲಿನಲ್ಲಿ ಕಳುಹಿಸಲು ಮೇ 10ರಂದು ಪಾರ್ಸೆಲ್ ಬುಕ್ ಮಾಡಲಾಗಿತ್ತು. ಆದರೆ, ಇದುವರೆಗೆ ಗ್ರೆನೇಡ್ ಪಾರ್ಸೆಲ್ ತಲುಪಿಲ್ಲ ಎಂದು ರಕ್ಷಣಾ ಇಲಾಖೆಯ ಪ್ರಕಟಣೆ ತಿಳಿಸಿದೆ. ಆದರೆ, ‘ಈ ಸಿಮ್ಯುಲೇಟರ್ ಪಾರ್ಸೆಲ್‌ಗಳು ನಮ್ಮ ಬಳಿಯೇ ಇವೆ’ ಎಂದು ರೈಲ್ವೆ ಪೊಲೀಸ್ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಝಾನ್ಸಿ ರಕ್ಷಣಾ ಇಲಾಖೆ ಅಧಿಕಾರಿಗಳು ಬೆಂಗಳೂರು ರೈಲ್ವೆ ಅಧಿಕಾರಿಗಳ ಸಂಪರ್ಕದಲ್ಲಿದ್ದು, ಗ್ರೆನೇಡ್ ಪಾರ್ಸೆಲ್‌ಗಳು ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ. ಇವುಗಳನ್ನು ತರಬೇತಿಗೆ ಬಳಸಲಿದ್ದು, ಅದರಲ್ಲಿ ಸ್ಫೋಟಕ ವಸ್ತುಗಳಿರಲಿಲ್ಲ. ರೈಲ್ವೆ ಅಧಿಕಾರಿಗಳ ಸಮನ್ವಯದೊಂದಿಗೆ ಸಮಸ್ಯೆ ಬಗೆಹರಿಸಲಾಗುವುದು ಎಂದು ಪ್ರಕಟಣೆ ಹೇಳಿದೆ.
ರೈಲು ನಿಲ್ದಾಣದ 1ನೇ ಪ್ಲಾಟ್‌ಫಾರ್ಮ್‌ನಲ್ಲಿ ಮೇ 31ರಂದು ಬೆಳಿಗ್ಗೆ ಸಿಮ್ಯುಲೇಟರ್ ಹ್ಯಾಂಡ್ ಗ್ರೆನೇಡ್ ಸಿಕ್ಕ ಬಳಿಕ ಕೆಲಹೊತ್ತು ಆತಂಕ ಸೃಷ್ಟಿಯಾಗಿತ್ತು.ಗ್ರೆನೇಡ್ ಹೇಗೆ ಪಾರ್ಸೆಲ್‌ನಿಂದ ಕೆಳಗೆ ಬಿತ್ತು. ಇದಕ್ಕೆ ರೈಲ್ವೆ ಅಥವಾ ರಕ್ಷಣಾ ಇಲಾಖೆಯ ನಿರ್ಲಕ್ಷ್ಯ ಕಾರಣವೇ ಎಂಬ ಕುರಿತು ತನಿಖೆ ನಡೆಸಲಾಗುವುದು ಎಂದು ಗುಳೇದ್ ಸೋಮವಾರ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.