ಬೆಂಗಳೂರು: ‘ವಿಟಮಿನ್ ಡಿ’ ಕೊರತೆ ಎದುರಿಸುತ್ತಿರುವವರು ಹಾಗೂ ಅಲರ್ಜಿ ಸಮಸ್ಯೆ ಹೊಂದಿರುವವರಿಗೆ ಮದ್ರಾಸ್ ಐ ಅಥವಾ ಕಂಜಕ್ಟಿವೈಟಿಸ್ (ಕಣ್ಣುಬೇನೆ) ಸಮಸ್ಯೆ ತೀವ್ರ ಸ್ವರೂಪದಲ್ಲಿ ಕಾಡಲಿದೆ ಎನ್ನುವುದು ನಾರಾಯಣ ನೇತ್ರಾಲಯದ ತಜ್ಞರು ನಡೆಸಿದ ಕಣ್ಣೀರು ಆಧಾರಿತ ಅಧ್ಯಯನದಿಂದ ತಿಳಿದುಬಂದಿದೆ.
ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ. ರೋಹಿತ್ ಶೆಟ್ಟಿ, ‘ಕಣ್ಣುಬೇನೆ ಸಮಸ್ಯೆಯು ಕೆಲ ದಿನಗಳಿಂದ ಗಣನೀಯ ಹೆಚ್ಚಳವಾಗಿದೆ. ಪ್ರತಿನಿತ್ಯ ನೂರಕ್ಕೂ ಅಧಿಕ ಮಂದಿ ಈ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಪಡೆದವರಲ್ಲಿ ಶೇ 30 ರಷ್ಟು ಮಂದಿ ಮಕ್ಕಳಾಗಿದ್ದಾರೆ. ಇದರ ತೀವ್ರತೆ ಬಗ್ಗೆ ನಮ್ಮ ಪ್ರಯೋಗಾಲಯದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿಕೊಂಡು ಅಧ್ಯಯನ ನಡೆಸಲಾಗಿದೆ. ಅಧ್ಯಯನಕ್ಕೆ ಒಳಪಟ್ಟವರಲ್ಲಿ ಶೇ 92 ರಷ್ಟು ಮಂದಿ ವಿಟಮಿನ್ ಡಿ ಕೊರತೆ ಎದುರಿಸುತ್ತಿದ್ದರು. ಈ ಫಲಿತಾಂಶದಿಂದ ಸುಧಾರಿತ ಚಿಕಿತ್ಸೆ ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.
‘ಸೋಂಕಿತರ ಕಣ್ಣೀರ ಪರೀಕ್ಷೆಯಿಂದ ರೋಗವನ್ನು ತೀವ್ರಗೊಳಿಸುವ ಅಂಶಗಳು ಯಾವುವು ಎಂಬುದನ್ನು ಪತ್ತೆ ಹಚ್ಚಲಾಗಿದೆ. ಇದರಿಂದ ರೋಗಿಯ ಸಮಸ್ಯೆಗೆ ಆರಂಭದಲ್ಲೇ ಪರಿಹಾರ ಸಾಧ್ಯವಾಗಲಿದೆ. ಹವಾಮಾನ ಬದಲಾವಣೆ ಹಾಗೂ ಮಳೆಯಿಂದಾಗಿ ಈ ಸೋಂಕು ಹರಡುತ್ತಿದೆ’ ಎಂದು ವಿವರಿಸಿದರು.
ಸಂಸ್ಥೆಯ ಉಪಾಧ್ಯಕ್ಷ ಡಾ. ನರೇನ್ ಶೆಟ್ಟಿ, ‘ಕಣ್ಣಿನ ಬಿಳಿ ಭಾಗ ಕೆಂಪಾಗುವುದು, ಕಣ್ಣುಗಳಲ್ಲಿ ಉರಿ ಮತ್ತು ನೋವು, ಕಣ್ಣಿನ ತುರಿಕೆ, ಕಣ್ಣುಗಳಲ್ಲಿ ನಿರಂತರ ನೀರು ಬರುವಿಕೆ, ಕಣ್ಣುಗಳು ಊದಿಕೊಳ್ಳುವುದು ‘ಮದ್ರಾಸ್ ಐ’ ಸಮಸ್ಯೆಯ ಪ್ರಮುಖ ಲಕ್ಷಣಗಳಾಗಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಜನರು ಇರುವ ಪ್ರದೇಶಗಳಿಗೆ ಹೋಗುವುದನ್ನು ಕಡಿಮೆ ಮಾಡಬೇಕು. ಪದೇ ಪದೇ ಕಣ್ಣುಗಳನ್ನು ಮುಟ್ಟಿಕೊಳ್ಳಬಾರದು. ಸೋಪುಗಳಲ್ಲಿ ಆಗಾಗ ಕೈಗಳನ್ನು ತೊಳೆದುಕೊಳ್ಳಬೇಕು. ಸಮಸ್ಯೆ ಇರುವವರು ಉಪಯೋಗಿಸಿದ ಟವೆಲ್ ಸೇರಿ ವಿವಿಧ ವಸ್ತುಗಳನ್ನು ಬಳಸಬಾರದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.