ADVERTISEMENT

ಡೆಲಿವರಿ ಬಾಯ್ ಮೇಲೆ ಹಲ್ಲೆ: ನಾಲ್ವರ ಸೆರೆ

​ಪ್ರಜಾವಾಣಿ ವಾರ್ತೆ
Published 1 ಮೇ 2024, 20:04 IST
Last Updated 1 ಮೇ 2024, 20:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಬೆಂಗಳೂರು: ಅನ್ನಪೂರ್ಣೇಶ್ವರಿನಗರ ಠಾಣೆ ವ್ಯಾಪ್ತಿಯಲ್ಲಿ ಆಹಾರ ಡೆಲಿವರಿ ಬಾಯ್‌ ಸಂಕೇತ್‌ ಎಂಬುವವರ ಮೇಲೆ ಹಲ್ಲೆ ಮಾಡಲಾಗಿದ್ದು, ಕೃತ್ಯ ಎಸಗಿದ್ದ ಆರೋಪದಡಿ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ದಾಮಿನಿ ಹಾಗೂ ಇತರ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

‘ಏಪ್ರಿಲ್ 28ರ ರಾತ್ರಿ ನಡೆದಿರುವ ಕೃತ್ಯ ಸಂಬಂಧ ಗಾಯಾಳು ಸಂಕೇತ್ ದೂರು ನೀಡಿದ್ದಾರೆ. ಆರೋಪಿಗಳಾದ ದಾಮಿನಿ, ಮರಿಯನ್, ನಾಗೇಂದ್ರ ಹಾಗೂ ಕಿರಣ್‌ನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ದೂರುದಾರ ಸಂಕೇತ್, ಆಹಾರ ಪೂರೈಕೆಗೆಂದು ಏಪ್ರಿಲ್ 23ರಂದು ಕಂಠೀರವ ಕ್ರೀಡಾಂಗಣದ ಬಳಿಗೆ ಹೋಗಿದ್ದರು. ಅದೇ ಸಂದರ್ಭದಲ್ಲಿ ದಾಮಿನಿ ಪರಿಚಯವಾಗಿತ್ತು. ಅವರಿಬ್ಬರೂ ಕೆಲ ನಿಮಿಷ ಮಾತನಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಮೊಬೈಲ್‌ಗಳು ಅದಲು–ಬದಲಾಗಿದ್ದವು. ಇದನ್ನು ಗಮನಿಸದೇ ಇಬ್ಬರೂ ಸ್ಥಳದಿಂದ ಹೊರಟು ಹೋಗಿದ್ದರು.’

ADVERTISEMENT

‘ಕೆಲ ಹೊತ್ತಿನ ನಂತರ ದಾಮಿನಿ, ಸಂಕೇತ್‌ ಅವರಿಗೆ ಕರೆ ಮಾಡಿದ್ದರು. ಮೊಬೈಲ್ ವಾಪಸು ನೀಡುವಂತೆ ತಿಳಿಸಿದ್ದರು. ಕೆಲಸದಲ್ಲಿದ್ದ ಸಂಕೇತ್, ಕೆಲ ದಿನ ಬಿಟ್ಟು ಮೊಬೈಲ್ ವಾಪಸು ನೀಡುವುದಾಗಿ ಹೇಳಿದ್ದರು. ಮೂರು ದಿನವಾದರೂ ಮೊಬೈಲ್ ವಾಪಸು ಕೊಟ್ಟಿರಲಿಲ್ಲ’ ಎಂದು ಪೊಲೀಸರು ತಿಳಿಸಿದರು.

‘ದಾಮಿನಿ ಹಾಗೂ ಸಹಚರರು, ಸಂಕೇತ್‌ ಅವರಿಗಾಗಿ ಹುಡುಕಾಟ ಆರಂಭಿಸಿದ್ದರು. ನಾಗರಬಾವಿ ವೃತ್ತದ ಬಳಿ ಸಂಕೇತ್‌ ಸಿಕ್ಕಿಬಿದ್ದಿದ್ದರು. ಅವರ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳು, ಬಿಯರ್ ಬಾಟಲಿಯಿಂದ ತಲೆಗೆ ಹೊಡೆದಿದ್ದರು. ಚಾಕುವಿನಿಂದ ಇರಿಯಲು ಯತ್ನಿಸಿ ಸ್ಥಳದಿಂದ ಪರಾರಿಯಾಗಿದ್ದರು. ಗಾಯಾಳು ಸಂಕೇತ್‌ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.