ಬೆಂಗಳೂರು: ಸ್ತ್ರಿಶಕ್ತಿ ಸಂಘದ ಸಾಲ ಮನ್ನಾ ಮಾಡಲು ಆಗ್ರಹಿಸಿ ಮಂಡ್ಯ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಸ್ತ್ರಿಶಕ್ತಿ ಸಂಘದ ಸದಸ್ಯರು ಮುಖ್ಯಮಂತ್ರಿ ನಿವಾಸದ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ಸಾಲ ಮನ್ನಾ ಮಾಡುವಂತೆ ಕೋರಿದರು.
‘6ನೇ ಗ್ಯಾರಂಟಿ’ಯಾಗಿ ಸ್ತ್ರಿಶಕ್ತಿ ಸಂಘದ ಸಾಲವನ್ನು ಮನ್ನಾ ಮಾಡಬೇಕು. ಇದರಿಂದ ರಾಜ್ಯದ ಸಾವಿರಾರು ಮಹಿಳೆಯರಿಗೆ ನೆರವಾಗಲಿದೆ. ಕನಿಷ್ಠ ₹ 50 ಸಾವಿರದ ವರೆಗಿನ ಸಾಲವನ್ನು ಮನ್ನಾ ಮಾಡಬೇಕು. ಅಲ್ಲದೇ ಹೊಸ ಸಾಲ ಒದಗಿಸಬೇಕು ಎಂದು ಕೋರಿದರು.
ವಿಧಾನಸಭೆ ಚುನಾವಣೆ ಪ್ರಚಾರಕ್ಕೆಂದು ಕೋಲಾರ ಜಿಲ್ಲೆಗೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬಂದಿದ್ದರು. ಅಂದಿನ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಆಡಳಿತಕ್ಕೆ ಬಂದರೆ ಸ್ತ್ರಿಶಕ್ತಿ ಸಂಘದ ಸಾಲವನ್ನೂ ಮನ್ನಾ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಅದರಂತೆ ಸಾಲ ಮನ್ನಾ ಯೋಜನೆ ಘೋಷಣೆ ಮಾಡಬೇಕು. ಸಿದ್ದರಾಮಯ್ಯ ಅವರ ಮೇಲೆ ವಿಶ್ವಾಸವಿದೆ. ಅವರು ನುಡಿದಂತೆ ನಡೆದು ಕೊಳ್ಳುತ್ತಾರೆ ಎನ್ನುವ ನಂಬಿಕೆಯೂ ಇದೆ. ಕೊಟ್ಟ ಮಾತಿನಂತೆ ಸಾಲಮನ್ನಾ ಯೋಜನೆ ಪ್ರಕಟಿಸಿ, ಮಹಿಳೆಯರಿಗೆ ನೆರವಾಗಲಿ ಎಂದು ಕೋರಿದರು.
ಕಳೆದ ಕೆಲವು ವರ್ಷಗಳಿಂದ ಸ್ತ್ರಿಶಕ್ತಿ ಸಂಘದ ಸದಸ್ಯರು ಸಂಕಷ್ಟದಲ್ಲಿದ್ದಾರೆ. ಜೀವನ ನಿರ್ವಹಣೆ ಮಾಡಲಿಕ್ಕೆ ಸಾಲ ಮಾಡಿದ್ದಾರೆ. ಆದ್ದರಿಂದ ಸಾಲವನ್ನು ಮನ್ನಾ ಮಾಡಲೇಕು ಎಂದು ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.