ADVERTISEMENT

ಬೆಂಗಳೂರು: ನಿವೃತ್ತರಿಗೆ ₹7,500 ಕನಿಷ್ಠ ಪಿಂಚಣಿ ನೀಡುವಂತೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಜೂನ್ 2024, 14:21 IST
Last Updated 2 ಜೂನ್ 2024, 14:21 IST
ಲಾಲ್‌ಬಾಗ್‌ನಲ್ಲಿ ಭಾನುವಾರ ನಡೆದ ತಿಂಗಳ ಸಭೆಯಲ್ಲಿ ಇಪಿಎಸ್‌–95 ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆ ಸದಸ್ಯರು ಭಾಗವಹಿಸಿದ್ದರು.  –ಪ್ರಜಾವಾಣಿ ಚಿತ್ರ
ಲಾಲ್‌ಬಾಗ್‌ನಲ್ಲಿ ಭಾನುವಾರ ನಡೆದ ತಿಂಗಳ ಸಭೆಯಲ್ಲಿ ಇಪಿಎಸ್‌–95 ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆ ಸದಸ್ಯರು ಭಾಗವಹಿಸಿದ್ದರು.  –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕನಿಷ್ಠ ₹7,500 ಪಿಂಚಣಿ ಹಾಗೂ ಭತ್ಯೆ, ವೈದ್ಯಕೀಯ ಸೌಲಭ್ಯ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಇಪಿಎಸ್‌–95 ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆ ಆಗ್ರಹಿಸಿದೆ.

ಭಾನುವಾರ ನಡೆದ ಇಪಿಎಸ್‌ ಪಿಂಚಿಣಿದಾರರ 77ನೇ ಮಾಸಿಕ ಸಭೆಯಲ್ಲಿ ಸಂಘದ ಕಾರ್ಯಾಧ್ಯಕ್ಷ ನಂಜುಂಡೇಗೌಡ, ‘ಇಪಿಎಸ್‌ ನಿವೃತ್ತರ ಪರವಾಗಿ 2022ರ ನವೆಂಬರ್ 4ರಂದು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಇಪಿಎಫ್‌ಒ ಅಧಿಕಾರಿಗಳು ಇದುವರೆಗೂ ಅನುಷ್ಠಾನಗೊಳಿಸಿಲ್ಲ. ವಿಳಂಬ ನೀತಿ ಅನುಸರಿಸುತ್ತಿರುವ ಅಧಿಕಾರಿಗಳ ನಡೆಯನ್ನು ಖಂಡಿಸಿದರು. ಮುಂದಿನ ದಿನಗಳಲ್ಲಿ ನಮ್ಮ ಹೋರಾಟವನ್ನು ತೀವ್ರಗೊಳಿಸುವ ಮೂಲಕ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ತಿಳಿಸಿದರು. 

ರಾಷ್ಟ್ರೀಯ ಸಂಘರ್ಷ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಜಿಎಸ್ಎಂ ಸ್ವಾಮಿ, ‘ದೇಶದ ಅಭಿವೃದ್ಧಿಯಲ್ಲಿ ನಿವೃತ್ತರು ಸಮರ್ಪಣಾ ಭಾವದಿಂದ ಕೆಲಸ ಮಾಡಿದ್ದಾರೆ. ಕೇಂದ್ರ ಸರ್ಕಾರ ನಮ್ಮೆಲ್ಲರ ಬೇಡಿಕೆಗಳಿಗೆ ಸ್ಪಂದಿಸುವ ಮೂಲಕ ಈಡೇರಿಸಬೇಕಾಗಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಹೊಸ ಸರ್ಕಾರ ರಚನೆಯಾದ ನಂತರ ರಾಜ್ಯದ ಪ್ರತಿಯೊಬ್ಬ ಸಂಸದನನ್ನು ಭೇಟಿಯಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಲಾಗುವುದು’ ಎಂದರು.

ADVERTISEMENT

ಸಂಘದ ವೀರ ಕುಮಾರ್ ಗಡದ್, ‘ಜೂನ್‌ 6ರಂದು ರಾಷ್ಟ್ರೀಯ ಸಂಘರ್ಷ ಸಮಿತಿ ಸಂಸ್ಥಾಪನಾ ದಿನವನ್ನು ದೇಶದಾದ್ಯಂತ ಆಚರಿಸಲಾಗುವುದು. ಈ ಬಗ್ಗೆ ಕಾರ್ಯಕ್ರಮ ಪಟ್ಟಿಯನ್ನು ಸಂಘಟನೆಯ ನಿವೃತ್ತ ನೌಕರರಿಗೆ ನೀಡಲಾಗುವುದು’ ಎಂದು ತಿಳಿಸಿದರು.

ಸಂಘದ ಪದಾಧಿಕಾರಿಗಳಾದ ಡೋಲಪ್ಪನವರ, ನಾಗರಾಜು, ಮನೋಹರ್, ರುಕ್ಮೇಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.