ADVERTISEMENT

ಮುನಿರತ್ನ ಗಡಿಪಾರಿಗೆ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2024, 15:23 IST
Last Updated 23 ಸೆಪ್ಟೆಂಬರ್ 2024, 15:23 IST
<div class="paragraphs"><p>ಶಾಸಕ ಮುನಿರತ್ನ</p></div>

ಶಾಸಕ ಮುನಿರತ್ನ

   

ಬೆಂಗಳೂರು: ‘ದಲಿತ ಸಮುದಾಯದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಮುನಿರತ್ನ ಅವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು’ ಎಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಸರ್ಕಾರವನ್ನು ಒತ್ತಾಯಿಸಿದೆ.

‘ಮುನಿರತ್ನ ರೌಡಿ ಹಿನ್ನೆಲೆಯಿಂದ ಬಂದವರು. ಅವರನ್ನು ಬಿಜೆಪಿಯಿಂದ ವಜಾ ಮಾಡಬೇಕು. ವಜಾ ಮಾಡದಿದ್ದರೆ ಶೋಷಿತ ಸಮುದಾಯದಿಂದ ಹೋರಾಟ ರೂಪಿಸಬೇಕಾಗುತ್ತದೆ’ ಎಂದು ಒಕ್ಕೂಟದ ಪ್ರಧಾನ ಸಂಚಾಲಕ ಕೆ.ಎಂ. ರಾಮಚಂದ್ರಪ್ಪ ಅವರು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಒತ್ತಾಯಿಸಿದರು.

ADVERTISEMENT

‘ಅಕ್ಟೋಬರ್ 1ರಂದು ವಿದ್ಯಾರ್ಥಿ, ದಲಿತ ಸಂಘಟನೆಗಳಿಂದ ಹೋರಾಟ ರೂಪಿಸಲಾಗಿದೆ. ನಮ್ಮ ಒಕ್ಕೂಟದಿಂದ ಆ ಹೋರಾಟಕ್ಕೆ ಬೆಂಬಲವಿದೆ. ಇದಕ್ಕೂ ಸ್ಪಂದಿಸದಿದ್ದರೆ ಶೋಷಿತ ಸಮದಾಯದಿಂದಲೂ ಹೋರಾಟ ರೂಪಿಸಲಾಗುವುದು’ ಎಂದರು.

‘ಶಾಸಕ ಮುನಿರತ್ನ ಗುತ್ತಿಗೆದಾರರಾಗಿದ್ದಾಗ ಕಳಪೆ ಕಾಮಗಾರಿ ಮಾಡಿ ವಿದ್ಯಾರ್ಥಿ ಸಾವಿಗೆ ಕಾರಣರಾಗಿದ್ದರು. ಬಿಬಿಎಂಪಿಯಲ್ಲಿ ಕಡತಕ್ಕೆ ಬೆಂಕಿ ಹಚ್ಚಲಾಗಿತ್ತು. ಮತದಾರರ ಚೀಟಿಯನ್ನು ಅಕ್ರಮವಾಗಿ ಸಂಗ್ರಹಿಸಿದ್ದರು. ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದು, ಇದನ್ನು ದೀರ್ಘಕಾಲ ಮುಂದುವರಿಸದೆ ಕಾಲಮಿತಿಯಲ್ಲಿ ವರದಿ ನೀಡುವಂತೆ ಸೂಚಿಸಬೇಕು’ ಎಂದು ಒಕ್ಕೂಟದ ಸಂಚಾಲಕ ಮಾವಳ್ಳಿ ಶಂಕರ್‌ ಆಗ್ರಹಿಸಿದರು.

‘ಜನಪ್ರತಿನಿಧಿಗಳಲ್ಲಿ ಭಾಷಾ ಪ್ರಜ್ಞೆ ಇರಬೇಕು. ಅಸಭ್ಯವಾಗಿ ನಡೆದುಕೊಳ್ಳುವ ವ್ಯಕ್ತಿಗಳಿಗೆ ಪಕ್ಷಗಳು ಕಡಿವಾಣ ಹಾಕಬೇಕು. ಮುನಿರತ್ನರಂತಹ ವ್ಯಕ್ತಿಗಳಿಗೆ  ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ನೀಡಬಾರದು. ರಿಯಲ್‌ ಎಸ್ಟೇಟ್‌, ಬಿಲ್ಡರ್‌ಗಳಿಗೆ ಟಿಕೆಟ್ ನೀಡುವುದನ್ನು ಮುಂದುವರಿಸಿದರೆ, ಅವರ ತಾಳಕ್ಕೆ ತಕ್ಕಂತೆ ಸರ್ಕಾರ ಕುಣಿಯಬೇಕಾಗುತ್ತದೆ’ ಎಂದರು.

ಒಕ್ಕೂಟದ ಸಂಚಾಲಕ ಎನ್‌. ಅನಂತ ನಾಯ್ಕ್, ಚಾಲನ ಸಮಿತಿ ಸದಸ್ಯರಾದ ಆದರ್ಶ ಯಲ್ಲಪ್ಪ, ಗೋಪಾಲ್‌, ರಾಮಕೃಷ್ಣ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.