ADVERTISEMENT

ತಿಂಗಳಿನಿಂದ ಕೆಟ್ಟುನಿಂತ ಮೆಟ್ರೊ ಲಿಫ್ಟ್‌ ದುರಸ್ತಿಗೆ ಒತ್ತಾಯ

ಮುಖ್ಯಮಂತ್ರಿಗೆ ಜನಜಾಗೃತಿ ವೇದಿಕೆ ಪತ್ರ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2022, 22:30 IST
Last Updated 24 ಡಿಸೆಂಬರ್ 2022, 22:30 IST
ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದ ಬಳಿ ಲಿಫ್ಟ್ ಕೆಟ್ಟಿದೆ ಎಂಬ ಫಲಕ ಹಾಕಲಾಗಿದೆ
ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದ ಬಳಿ ಲಿಫ್ಟ್ ಕೆಟ್ಟಿದೆ ಎಂಬ ಫಲಕ ಹಾಕಲಾಗಿದೆ   

ಚಿಂತಾಮಣಿ: ಹಳೆ ಮದ್ರಾಸ್ ರಸ್ತೆಯ ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದ ಲಿಫ್ಟ್ ಸುಮಾರು ಒಂದು ತಿಂಗಳಿನಿಂದ ಕೆಟ್ಟು ನಿಂತಿದೆ ಎಂದು ನಗರದ ಜನಜಾಗೃತಿ ವೇದಿಕೆ ಆರೋಪಿಸಿದೆ.

ಇದರಿಂದ ವೃದ್ಧರು ಸ್ಕೈವಾಕ್ ಲಿಫ್ಟ್ ಹತ್ತಲು ತೊಂದರೆ ಅನುಭವಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಲಿಫ್ಟ್ ಅನ್ನು ಶೀಘ್ರವೇ ದುರಸ್ತಿಗೊಳಿಸಬೇಕು
ಎಂದು ವೇದಿಕೆ ಪದಾಧಿಕಾರಿಗಳು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಇ-ಮೇಲ್ ಮೂಲಕ ಮನವಿ ಮಾಡಿದ್ದಾರೆ.

ಬುಧವಾರ ಈ ಬಗ್ಗೆ ಮಾತನಾಡಿದ ವೇದಿಕೆ ನಿರ್ದೇಶಕ ಜಿ.ವಿ. ಮಂಜುನಾಥ್, ‘ದೈನಂದಿನ ಚಟುವಟಿಕೆಗಳಿಗಾಗಿ ಚಿಂತಾಮಣಿ, ಕೋಲಾರ, ಕೆಜಿಎಫ್, ಮುಳಬಾಗಿಲು, ಆಂಧ್ರಪ್ರದೇಶದ ಮದನಪಲ್ಲಿ, ಕಡಪಾ ಕಡೆಯಿಂದ ಪ್ರತಿನಿತ್ಯ ಸಾವಿರಾರು ಜನರು ಹಳೆ ಮದ್ರಾಸ್ ರಸ್ತೆಯ ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣಕ್ಕೆ ಹೋಗುತ್ತಾರೆ. ಅಲ್ಲಿನ ಲಿಫ್ಟ್ ಸುಮಾರು ಒಂದು ತಿಂಗಳಿನಿಂದ ಕೆಟ್ಟು ನಿಂತಿದ್ದು, ಸಾವಿರಾರು ಮಂದಿ ಸಮಸ್ಯೆ ಎದುರಿಸುವಂತಾಗಿದೆ’ ಎಂದರು.

ADVERTISEMENT

ಚಿಂತಾಮಣಿ, ಕೋಲಾರ, ಕೆಜಿಎಫ್ ಮುಳಬಾಗಿಲು ಕಡೆಯಿಂದ ಹೋಗುವ ಬಸ್ಸುಗಳು ಬೈಯಪ್ಪನಹಳ್ಳಿ ನಿಲ್ದಾಣದ ಎಡಭಾಗದಲ್ಲಿ ನಿಲ್ಲಿಸುತ್ತವೆ. ಮೆಟ್ರೊ ಹತ್ತಲು ಬಲಭಾಗಕ್ಕೆ ಹೋಗಬೇಕು. ಆದರೆ, ಲಿಫ್ಟ್ ಕೆಟ್ಟು ನಿಂತಿದೆ. ಜತೆಗೆ ರಸ್ತೆ ವಿಭಜಕವು ಎತ್ತರದಲ್ಲಿದ್ದು, ಕಬ್ಬಿಣದ ಸರಳುಗಳನ್ನು ಅಳವಡಿಸಲಾಗಿದೆ. ಹೀಗಾಗಿ ರಸ್ತೆ ದಾಟಲು ಸಾಧ್ಯವೇ ಇಲ್ಲ. ಇನ್ನು ವಯಸ್ಸಾದವರು ರಸ್ತೆ ದಾಟುವುದು ಹೇಗೆ ಎಂದು ಜನಜಾಗೃತಿ ವೇದಿಕೆ ಸರ್ಕಾರವನ್ನು ಪ್ರಶ್ನಿಸಿದೆ.

‘ಈ ಸಂಬಂಧ ಬಿಬಿಎಂಪಿ ಕಚೇರಿಗೆ ಹಲವು ಬಾರಿ ದೂರು ನೀಡಲಾಗಿದೆ. ಯಾವುದೇ ಪ್ರಯೋಜನವಾಗಿಲ್ಲ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.