ADVERTISEMENT

ಎಚ್‌ಐವಿ ಪೀಡಿತ ಲೈಂಗಿಕ ಕಾರ್ಯಕರ್ತೆಯರಿಗೆ ಪುನರ್ವಸತಿ ಕಲ್ಪಿಸಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 19:31 IST
Last Updated 16 ಅಕ್ಟೋಬರ್ 2021, 19:31 IST

ಬೆಂಗಳೂರು: ‘ಲೈಂಗಿಕ ಕಾರ್ಯಕರ್ತೆಯರಲ್ಲಿ ಅನೇಕರು ದುರ್ಬಲರಿದ್ದಾರೆ. ಅಂಗವಿಕಲರು, ಆ್ಯಸಿಡ್‌ ದಾಳಿಗೆ ತುತ್ತಾದವರೂ ಈ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. ಈ ಪೈಕಿ ಬಹುಪಾಲು ಮಂದಿ ಸ್ವಯಂ ಪ್ರೇರಣೆಯಿಂದ ವೃತ್ತಿ ತೊರೆಯಲು ತೀರ್ಮಾನಿಸಿದ್ದಾರೆ. ಅಂತಹವರಿಗೆ ಪುನರ್ವಸತಿ ಕಲ್ಪಿಸಲು ಸರ್ಕಾರ ಮುಂದಾಗಬೇಕು’ ಎಂದು ಸಾಮಾಜಿಕ ಕಾರ್ಯಕರ್ತೆ ರೂಪಾ ಹಾಸನ ಒತ್ತಾಯಿಸಿದ್ದಾರೆ.

‘ಎಚ್‌ಐವಿ ಸೋಂಕಿಗೊಳಪಟ್ಟ ಲೈಂಗಿಕ ಕಾರ್ಯಕರ್ತೆಯೊಬ್ಬಳು ಮುಕ್ತವಾಗಿ ವೃತ್ತಿಯಲ್ಲಿ ತೊಡಗಿಕೊಂಡಿದ್ದಳು. ಇದರಿಂದ ಆಕೆಯ ಜೊತೆ ಲೈಂಗಿಕ ಸಂಪರ್ಕ ಬೆಳೆಸುವವರಿಗೆ ಸೋಂಕು ತಗಲುವ ಅಪಾಯವಿದ್ದು, ಆಕೆಯನ್ನು ಬಂಧಿಸುವಂತೆ ಮುಂಬೈನ ದಿಂಡೋಶಿ ಸೆಷನ್ಸ್‌ ನ್ಯಾಯಾಲಯ ಆದೇಶಿಸಿದೆ. ರಾಜ್ಯದಲ್ಲಿ ಎಚ್‌ಐವಿ ಸೋಂಕಿಗೊಳಪಟ್ಟವರು ಈಗಲೂ ಈ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. ಅವರನ್ನು ವೃತ್ತಿಯಿಂದ ದೂರ ಇಟ್ಟು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ’ ಎಂದರು.

‘ರಾಜ್ಯದಲ್ಲಿ 8 ಸಾವಿರ ಮಂದಿ ಎಚ್‌ಐವಿ ಪೀಡಿತ ಲೈಂಗಿಕ ಕಾರ್ಯಕರ್ತೆಯರಿದ್ದು, ಅವರೆಲ್ಲಾ ಕರ್ನಾಟಕ ರಾಜ್ಯ ಏಡ್ಸ್‌ ನಿಯಂತ್ರಣ ಮಂಡಳಿಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ ಅತ್ಯಾಚಾರಕ್ಕೊಳಪಟ್ಟವರು, ಅಪ್ರಾಪ್ತರು, ಎಚ್‌ಐವಿ ಪೀಡಿತರು ಹಾಗೂ 45 ವರ್ಷ ಮೇಲ್ಪಟ್ಟವರೂ ಇದ್ದಾರೆ. ಅವರನ್ನು ಆದ್ಯತೆಯ ಮೇರೆಗೆ ಈ ವೃತ್ತಿಯಿಂದ ಹೊರಗಿಡಬೇಕು. ವೃತ್ತಿ ಕೌಶಲ ಗಳಿಸಲು ಅಗತ್ಯವಿರುವ ತರಬೇತಿ, ಶಿಕ್ಷಣ ಒದಗಿಸಬೇಕು. ಸಾಮರ್ಥ್ಯ ವೃದ್ಧಿಸುವ ಕೆಲಸವೂ ಆಗಬೇಕು. ತರಬೇತಿ ಅವಧಿಯಲ್ಲಿ ದಿನಕ್ಕೆ ₹300 ಗೌರವ ಧನ ನೀಡಬೇಕು. ಕಾಂಡೋಮ್‌ ಬಳಸುವುದಾಗಿ ಅನೇಕರು ಹೇಳುತ್ತಾರೆ. ಆದರೆ ವಾಸ್ತವದಲ್ಲಿ ಅದು ಪಾಲನೆಯೇ ಆಗುತ್ತಿಲ್ಲ. 2,600 ಮಂದಿ ನಿಯಮಿತವಾಗಿ ಎಚ್‌ಐವಿ ಚಿಕಿತ್ಸೆ ಪಡೆದುಕೊಳ್ಳುತ್ತಿಲ್ಲ ಎಂದೂ ವರದಿಗಳು ಹೇಳುತ್ತವೆ. ಹೀಗಿದ್ದರೂ ಏಡ್ಸ್‌ ನಿಯಂತ್ರಣ ಮಂಡಳಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ದೂರಿದರು.

ADVERTISEMENT

‘2015ರಲ್ಲಿ ಕರ್ನಾಟಕ ರಾಜ್ಯ ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿ ಅಧ್ಯಯನ ಸಮಿತಿ ರಚಿತವಾಗಿತ್ತು. ನಟಿ ಜಯಮಾಲಾ ನೇತೃತ್ವದ ಸಮಿತಿಯಲ್ಲಿ ನಾನೂ ಇದ್ದೆ. ಸಮಿತಿಯು 2017ರ ಫೆಬ್ರುವರಿಯಲ್ಲಿ ಅಧ್ಯಯನ ವರದಿ ಸಲ್ಲಿಸಿತ್ತು. ಆ ವರದಿ ಇದುವರೆಗೂ ಅನುಷ್ಠಾನಗೊಂಡಿಲ್ಲ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.