ADVERTISEMENT

ಬೆಂಗಳೂರು: ಬೀದಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2023, 16:09 IST
Last Updated 19 ಡಿಸೆಂಬರ್ 2023, 16:09 IST
ಬೆಂಗಳೂರು ಜಿಲ್ಲಾ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಮತ್ತು ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘಟನೆಯ ಸದಸ್ಯರು ಬಿಬಿಎಂಪಿ ಕಚೇರಿಯ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ಮಾಡಿದರು –ಪ್ರಜಾವಾಣಿ ಚಿತ್ರ
ಬೆಂಗಳೂರು ಜಿಲ್ಲಾ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಮತ್ತು ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘಟನೆಯ ಸದಸ್ಯರು ಬಿಬಿಎಂಪಿ ಕಚೇರಿಯ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ಮಾಡಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: 'ನ್ಯಾಯಾಲಯಗಳ ಆದೇಶಗಳನ್ನು ಉಲ್ಲಂಘಿಸಿ ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸಿರುವ ಬಿಬಿಎಂಪಿ, ಅದೇ ಸ್ಥಳದಲ್ಲಿ ವ್ಯಾಪಾರ ಮಾಡಲು ಮತ್ತೆ ಅವಕಾಶ ಮಾಡಿಕೊಡಬೇಕು. ನಷ್ಟಕ್ಕೆ ಪರಿಹಾರವನ್ನೂ ನೀಡಬೇಕು’ ಎಂದು ಬೀದಿ ವ್ಯಾಪಾರಿಗಳು ಆಗ್ರಹಿಸಿದರು.

ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಮತ್ತು ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘಟನೆ ಸದಸ್ಯರು ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟಿಸಿದರು.

‘ಜಯನಗರ, ಮಹದೇವಪುರ, ಮಲ್ಲೇಶ್ವರ , ಬನಶಂಕರಿ, ಮೂಡಲಪಾಳ್ಯ ಹಾಗೂ ಇತರೆ ಪ್ರದೇಶಗಳಲ್ಲಿ ಬೀದಿ ವ್ಯಾಪಾರಿಗಳನ್ನು ತೆರವು ಮಾಡಲಾಗಿದ್ದು, ಅಲ್ಲೇ ಮತ್ತೆ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು. ಪ್ರತಿ ಪ್ರದೇಶ ವ್ಯಾಪಾರ ಸಮಿತಿ ಅಡಿಯಲ್ಲಿ ಬೀದಿ ವ್ಯಾಪಾರಿಗಳ ಸಮೀಕ್ಷೆ ಬಿಬಿಎಂಪಿ ನೇತೃತ್ವದಲ್ಲಿ ನಡೆಯಬೇಕು. ಅಲ್ಲಿಯವರೆಗೆ ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸಬಾರದು. ಗುರುತಿನ ಚೀಟಿ / ವ್ಯಾಪಾರದ ಪ್ರಮಾಣ ಪತ್ರಗಳನ್ನು ನವೀಕರಿಸಬೇಕು. ಸಮೀಕ್ಷೆ ಕುರಿತು ಬೀದಿ ವ್ಯಾಪಾರಿಗಳ ಸಂಘಟನೆಗಳೊಂದಿಗೆ ಸಭೆ ನಡೆಸಬೇಕು ಮತ್ತು ಅವರ ಸಲಹೆ ಸೂಚನೆಗಳನ್ನು ಪಡೆಯಬೇಕು’ ಎಂದು ಬೇಡಿಕೆ ಸಲ್ಲಿಸಿದರು.

ADVERTISEMENT

‘ಬೀದಿ ವ್ಯಾಪಾರ ಮಾಡುವ ಹಕ್ಕು ಸಂವಿಧಾನದಲ್ಲಿ ನಮಗೆ ನೀಡಲಾಗಿದೆ. ಬೀದಿ ವ್ಯಾಪಾರಸ್ಥರ ಹಕ್ಕುಗಳನ್ನು ರಕ್ಷಿಸಬೇಕೆಂದು ಹಲವಾರು ನ್ಯಾಯಾಲಯಗಳ ತೀರ್ಪುಗಳು ಹೇಳಿವೆ‌’ ಎಂದು ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್. ಬಾಬು ಹೇಳಿದರು.

‘ಬೀದಿ ವ್ಯಾಪಾರಿಗಳನ್ನು ರಕ್ಷಿಸುವ ಕಾನೂನನ್ನು ಬಿಬಿಎಂಪಿ ಬಹಿರಂಗವಾಗಿ ಉಲ್ಲಂಘಿಸಿ ನಮ್ಮನ್ನು ಎತ್ತಂಗಡಿ ಮಾಡುತ್ತಿದೆ’ ಎಂದು ಸಂಘದ ಕಾರ್ಯದರ್ಶಿ ಪಿ.ಪಿ. ಅಪ್ಪಣ್ಣ ದೂರಿದರು.

ಬೀದಿ ವ್ಯಾಪಾರಿಗಳಿಗೆ ನೀಡಿರುವ ಗುರುತಿನ ಚೀಟಿ, ವ್ಯಾಪಾರದ ಪ್ರಮಾಣಪತ್ರವನ್ನು ನವೀಕರಿಸಬೇಕು ಎಂದು ಸಂಘದ ಉಪಾಧ್ಯಕ್ಷೆ ಶಶಿಕಲಾ ಆಗ್ರಹಿಸಿದರು.

‘ನಾವು ಬೀದಿ ಬದಿಗಳಲ್ಲಿ ವ್ಯಾಪಾರ ಮಾಡದಿದ್ದರೆ ಮಧ್ಯಮವರ್ಗದವರು ಮಾಲ್‌, ಮಾರ್ಟ್‌ಗಳಿಗೆ ಹೋಗಿ ವಸ್ತುಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ’ ಎಂದು ಸಂಘದ ಜಂಟಿ ಕಾರ್ಯದರ್ಶಿ ಸಯ್ಯದ್ ಝಮೀರ್ ಹೇಳಿದರು.

‘ಬಿಬಿಎಂಪಿ ಮುಖ್ಯ ಆಯುಕ್ತರೊಂದಿಗೆ ಸಭೆ ನಡೆಸಿ, ನಿಮ್ಮ ಬೇಡಿಕೆಗಳನ್ನು ಚರ್ಚಿಸಲಾಗುವುದು’ ಎಂದು ಆರೋಗ್ಯ ವಿಭಾಗದ ವಿಶೇಷ ಆಯುಕ್ತ ರೆಡ್ಡಿ ಶಂಕರಬಾಬು ಭರವಸೆ ನೀಡಿದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.