ಬೆಂಗಳೂರು: ಬಿ. ಬಸವಲಿಂಗಪ್ಪ ಅವರ ಪುಣ್ಯಸ್ಮರಣೆಯ ಅಂಗವಾಗಿ ದಲಿತ ಸಂಘರ್ಷ ಸಮಿತಿಯ (ಡಿಎಸ್‌ಎಸ್) ವತಿಯಿಂದ ಯಲಹಂಕ ಉಪನಗರದ ಮದರ್ ಡೇರಿ ವೃತ್ತದಿಂದ ಅಳ್ಳಾಳಸಂದ್ರ ಬಸ್ ನಿಲ್ದಾಣದವರೆಗೆ (ಬಿ. ಬಸವಲಿಂಗಪ್ಪ ಅವರ ಪುಣ್ಯಭೂಮಿ) ಕಾಲ್ನಡಿಗೆ ಜಾಥಾ ನಡೆಯಿತು.
ಜಾಥಾ, ಯಲಹಂಕ ಉಪನಗರದ ಬಸ್ ನಿಲ್ದಾಣದ ಮುಖ್ಯರಸ್ತೆಯ ಮೂಲಕ ಚಿಕ್ಕಬೊಮ್ಮಸಂದ್ರ ಕ್ರಾಸ್ ಮಾರ್ಗವಾಗಿ ಶೇಷಾದ್ರಿಪುರ ಕಾಲೇಜಿನ ರಸ್ತೆ, ದೊಡ್ಡಬಳ್ಳಾಪುರ ರಸ್ತೆಯ ಮಾರ್ಗವಾಗಿ ಅಳ್ಳಾಳಸಂದ್ರ ಬಸ್ ನಿಲ್ದಾಣ ಮುಂಭಾಗದಲ್ಲಿರುವ ಬಿ. ಬಸವಲಿಂಗಪ್ಪ ಅವರ ಪುಣ್ಯಭೂಮಿಗೆ ತಲುಪಿತು. ನಂತರ ಬಸವಲಿಂಗಪ್ಪ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಜಾಥಾದಲ್ಲಿ ಡಿಎಸ್‌ಎಸ್‌ನ ಹಲವಾರು ಸದಸ್ಯರು ಪಾಲ್ಗೊಂಡಿದ್ದರು.
ಡಿಎಸ್‌ಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್. ಮಾರಪ್ಪ, ‘ಬಿ. ಬಸವಲಿಂಗಪ್ಪ ಅವರು ದಲಿತರು ತಲೆಯ ಮೇಲೆ ಮಲ ಹೊರುವ ಪದ್ಧತಿಯನ್ನು ನಿಷೇಧಿಸಿದ್ದರು. ಜೊತೆಗೆ ಭೂ ಪರಭಾರೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿದ್ದರು. ಆದ್ದರಿಂದ ಬಸವಲಿಂಗಪ್ಪ ಅವರ ಪ್ರತಿಮೆಯನ್ನು ವಿಧಾನಸೌಧದ ಆವರಣದಲ್ಲಿ ನಿರ್ಮಿಸಬೇಕು. ಯಲಹಂಕದಲ್ಲಿರುವ ಅವರ ಸಮಾಧಿಯನ್ನು ಸ್ಮಾರಕವನ್ನಾಗಿ ಮಾಡಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.