ಬೆಂಗಳೂರು: ನಟ ದಿವಂಗತ ವಿಷ್ಣುವರ್ಧನ್ ಅವರ ಪುಣ್ಯಭೂಮಿಯನ್ನು ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿರುವ ಡಾ.ವಿಷ್ಣುವರ್ಧನ್ ಅಭಿಮಾನಿ ಸಂಘಗಳ ಒಕ್ಕೂಟ, ಇದೇ 17ರಂದು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.
‘ಅಭಿಮಾನ್ ಸ್ಟುಡಿಯೊದಲ್ಲಿ ವಿಷ್ಣುವರ್ಧನ್ ಅವರ ಪುಣ್ಯಭೂಮಿ ಇದೆ. ಸ್ಟುಡಿಯೊ ಮಾಲೀಕರು ಅಭಿಮಾನಿಗಳಿಗೆ ಒಳಪ್ರವೇಶಿಸಲು ನಿರ್ಬಂಧಗಳನ್ನು ವಿಧಿಸುವುದರ ಜೊತೆಗೆ, ಅಲ್ಲಿ ವಿಷ್ಣುವರ್ಧನ್ ಅವರ ಜನ್ಮದಿನ ಮತ್ತು ಪುಣ್ಯಸ್ಮರಣೆಗೆ ಪ್ರತಿವರ್ಷ ಹಲವಾರು ತೊಂದರೆಗಳನ್ನು ನೀಡುತ್ತಿದ್ದಾರೆ. ಈ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರಿಗೆ ಅಹವಾಲು ಸಲ್ಲಿಸಲಾಗಿದೆ. ನಟನಿಗೆ ಎರಡು ಕಡೆ ಸ್ಮಾರಕ, ಪುಣ್ಯಭೂಮಿ ಮಾಡುವುದು ಸರ್ಕಾರಕ್ಕೆ ಕಷ್ಟವಾದರೆ, ಆ ಜಮೀನಿಗೆ ತಗಲುವ ವೆಚ್ಚ ಮತ್ತು ಪುಣ್ಯಭೂಮಿ ಅಭಿವೃದ್ಧಿಗೆ ಬೇಕಾಗುವ ಹಣವನ್ನು ಅಭಿಮಾನಿಗಳೇ ನೀಡುವುದಾಗಿ ತಿಳಿಸಿರುತ್ತೇವೆ’ ಎಂದು ಒಕ್ಕೂಟದ ಮುಖಂಡ ವೀರಕಪುತ್ರ ಶ್ರೀನಿವಾಸ ಹೇಳಿದ್ದಾರೆ.
‘ಬದುಕಿನುದ್ದಕ್ಕೂ ಕಲಾರಸಿಕರನ್ನು ಮನೋರಂಜಿಸುತ್ತಾ, ನಾಡು–ನುಡಿ ರಕ್ಷಣೆಗಾಗಿ ಸದಾ ಸಿದ್ಧರಾಗಿದ್ದ ವಿಷ್ಣುವರ್ಧನ್ ಅವರು ಅಗಲಿ ಇದೇ 30ಕ್ಕೆ ಒಂದೂವರೆ ದಶಕ ಕಳೆಯಲಿದೆ. ಇಷ್ಟು ವರ್ಷವಾದರೂ ಅವರು ನೋವಿನಿಂದ ಮುಕ್ತವಾಗಿಲ್ಲ ಎನ್ನುವುದು ನಾಡಿಗೆ ನಾಡೇ ತಲೆ ತಗ್ಗಿಸಬೇಕಾದ ಸಂಗತಿ. ಆದ್ದರಿಂದ ಬೃಹತ್ ಪ್ರತಿಭಟನೆ ಮಾಡುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.
‘ವಿಷ್ಣುವರ್ಧನ್ ಅವರ ಸ್ಮಾರಕ ಮೈಸೂರಿನಲ್ಲಿ ಲೋಕಾರ್ಪಣೆಗೊಂಡಿದ್ದರೂ ನಾಡಿನ ಪ್ರತಿ ಅಭಿಮಾನಿಯೂ ಅಭಿಮಾನ್ ಸ್ಟುಡಿಯೊದಲ್ಲಿಯೇ ವಿಷ್ಣುವರ್ಧನ್ ಇರುವಿಕೆಯನ್ನು ನಂಬಿದ್ದಾರೆ. ಅವರ ಪ್ರತಿ ಹುಟ್ಟುಹಬ್ಬ ಮತ್ತು ಪುಣ್ಯಸ್ಮರಣೆಯ ದಿನಗಳಂದು ಐವತ್ತು ಸಾವಿರಕ್ಕೂ ಹೆಚ್ಚು ಜನ ಪುಣ್ಯಭೂಮಿಗೆ ಬಂದು, ದರ್ಶನಮಾಡಿ ಹೋಗುತ್ತಿದ್ದಾರೆ. ಸ್ಮಾರಕ ಎಲ್ಲೇ ಇರಲಿ, ಪುಣ್ಯಭೂಮಿ ಮಾತ್ರ ಅಂತ್ಯಸಂಸ್ಕಾರಗೊಂಡ ಜಾಗದಲ್ಲಿಯೇ ಇರಲಿ ಎಂಬ ಮನೋಭಾವ ಪ್ರತಿ ಅಭಿಮಾನಿಯದ್ದಾಗಿದೆ’ ಎಂದು ಹೇಳಿದ್ದಾರೆ.
ಶ್ರೀರಾಮಚಂದ್ರನ ವನವಾಸಕ್ಕೂ ಒಂದು ಅಂತ್ಯವಿತ್ತು. ಆದರೆ ವಿಷ್ಣುವರ್ಧನ್ ಅವರ ಪುಣ್ಯಭೂಮಿ (ಸಮಾಧಿ) ವಿವಾದ ಈವರೆಗೂ ಅಂತ್ಯ ಕಾಣದಿರುವುದು ನೋವಿನ ಸಂಗತಿ।ವೀರಕಪುತ್ರ ಶ್ರೀನಿವಾಸ ಡಾ.ವಿಷ್ಣುವರ್ಧನ್ ಅಭಿಮಾನಿ ಸಂಘಗಳ ಒಕ್ಕೂಟದ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.