ಬೆಂಗಳೂರು: ರೇಷ್ಮೆ ಕೃಷಿ ಪಾಲುದಾರರಿಗೆ ಸರ್ಕಾರ ನೀಡುತ್ತಿರುವ ಸಹಾಯಧನ ಬಹಳ ಕಡಿಮೆ ಇದೆ. ಇದನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ರೇಷ್ಮೆ ಮಂಡಳಿ ಸದಸ್ಯ, ಸಂಸದ ಎ.ಜಿ. ಲಕ್ಷ್ಮಿನಾರಾಯಣ ಆಗ್ರಹಿಸಿದರು.
ನಗರದಲ್ಲಿ ಶನಿವಾರ ನಡೆದ ರೇಷ್ಮೆ ಕೃಷಿ ಪಾಲುದಾರರ ಸಭೆ ಮತ್ತು ಕೇಂದ್ರ ರೇಷ್ಮೆ ಮಂಡಳಿ ಅಮೃತ ಮಹೋತ್ಸವ ಆಚರಣೆಯಲ್ಲಿ ಅವರು ಮಾತನಾಡಿದರು.
ಕೃಷಿ ಪಾಲುದಾರರಿಗೆ ನೀಡುತ್ತಿರುವ ಸಾಲ ಸೌಲಭ್ಯವನ್ನು ₹4 ಲಕ್ಷದಿಂದ ₹10 ಲಕ್ಷಕ್ಕೆ ಏರಿಸಬೇಕು. ರೀಲರ್‌ಗಳಿಗೂ ಸಹಾಯಧನವನ್ನು ಏರಿಸಬೇಕು. ರೇಷ್ಮೆಯನ್ನು ಜಿಎಸ್‌ಟಿಯಿಂದ ಹೊರಗಿಡಬೇಕು ಎಂದು ತಿಳಿಸಿದರು.
ಕೇಂದ್ರ ಜವಳಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಪ್ರಜಕ್ತಾ ಎಲ್. ವರ್ಮಾ ಮಾತನಾಡಿ, ‘ಭಾರತದಲ್ಲಿ ವರ್ಷಕ್ಕೆ 39 ಟನ್ ರೇಷ್ಮೆ ಉತ್ಪಾದನೆಯಾಗುತ್ತಿದ್ದು, ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. ರೇಷ್ಮೆ ಕೃಷಿ ಮತ್ತು ಉತ್ಪನ್ನಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡರೆ ಚೀನಾವನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಭಾರತ ಏರಲಿದೆ’ ಎಂದು ತಿಳಿಸಿದರು.
ಕೇಂದ್ರ ಜವಳಿ ಸಚಿವಾಲಯದ ಕಾರ್ಯದರ್ಶಿ ರಚನಾ ಶಾ ಮಾತನಾಡಿ, ‘32 ದೇಶಗಳಿಗೆ ಭಾರತದಿಂದ ರೇಷ್ಮೆ ರಫ್ತು ಆಗುತ್ತಿದೆ. ₹ 2087 ಕೋಟಿ ರಫ್ತು ವಹಿವಾಟು ನಡೆಯುತ್ತಿದೆ. ರೇಷ್ಮೆಯಿಂದ ಬಟ್ಟೆಯ ಹೊರತಾಗಿ ಅನೇಕ ಉಪ ಉತ್ಪನ್ನಗಳನ್ನು ತಯಾರಿಸಲು ಸಾಧ್ಯ. ಅದಕ್ಕೆ ಸ್ಟಾರ್ಟ್‌ಅಪ್ ಸಹಿತ ಕೇಂದ್ರದ ಅನೇಕ ಯೋಜನೆಗಳ ಮೂಲಕ ಪ್ರೋತ್ಸಾಹ ನೀಡಲಾಗುವುದು’ ಎಂದರು.
ಮಂಡಳಿಯ ನಿವೃತ್ತ ಸದಸ್ಯ ಕಾರ್ಯದರ್ಶಿ ವಿ. ಬಾಲಸುಬ್ರಹ್ಮಣ್ಯನ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರೇಷ್ಮೆ ಉಪ ಉತ್ಪನ್ನಗಳಾದ ‘ಸೆರಿ ವಿನ್’, ‘ನಿರ್ಮೂಲ್’, ‘ಮಿ.ಪ್ರೊ’ಗಳನ್ನು ಬಿಡುಗಡೆ ಮಾಡಲಾಯಿತು. ಕೇಂದ್ರ ರೇಷ್ಮೆ ಮಂಡಳಿ ಸದಸ್ಯ ಕಾರ್ಯದರ್ಶಿ ಪಿ. ಶಿವಕುಮಾರ್, ನಿರ್ದೇಶಕಿ ಸಿ. ಮೀನಾಕ್ಷಿ ಕಾರ್ಯಕ್ರಮದ ವಿವರ ನೀಡಿದರು.
ಉದ್ಯಮಿಗಳಿಗೂ ಪ್ರೋತ್ಸಾಹ
‘ಭಾರತವು ರೇಷ್ಮೆ ಉಡುಪುಗಳಷ್ಟೇ ಅಲ್ಲದೆ ಉಪ ಉತ್ಪನ್ನಗಳ ತಯಾರಿಕೆಯಲ್ಲಿಯೂ ಹೆಸರುವಾಸಿಯಾಗಿದೆ. ರೇಷ್ಮೆ ಉದ್ಯಮ ರೈತರಿಗೆ ಮಾತ್ರವಲ್ಲ ಉದ್ಯಮಿಗಳಿಗೂ ಪ್ರೋತ್ಸಾಹ ದೊರೆಯುತ್ತಿದೆ’ ಎಂದು ಸಂಸದ ಈರಣ್ಣ ಬಿ. ಕಡಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.