ಬೆಂಗಳೂರು: ‘ಕಾಂತರಾಜ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಆಯೋಗ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ರಾಜಕೀಯ ಪ್ರೇರಿತವಾಗಿದ್ದು, ಅದನ್ನು ತಿರಸ್ಕರಿಸಬೇಕು’ ಎಂದು ಒತ್ತಾಯಿಸಿ ಒಕ್ಕಲಿಗರ ಕ್ರಿಯಾ ಸಮಿತಿಯ ಸದಸ್ಯರು ಸ್ವಾತಂತ್ರ್ಯ ಉದ್ಯಾನದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
‘ಕಾಂತರಾಜು ಅವರ ಜಾತಿ ಗಣತಿಯ ವರದಿ ಅಪೂರ್ಣವಾಗಿದೆ. ಇದರಲ್ಲಿ ಒಕ್ಕಲಿಗರ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ತೋರಿಸಲಾಗಿದೆ. ಇದನ್ನು ನಾವು ಒಪ್ಪಲು ಸಾಧ್ಯವಿಲ್ಲ. ಅದಕ್ಕಾಗಿ ನೈಜವಾದ ನಿಖರವಾದ ಜಾತಿ ಗಣತಿ ನಡೆಸಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
‘ಈ ವರದಿಗೆ ಯಾವುದೇ ಮಾನ್ಯತೆ ಇಲ್ಲ. ಕಾರ್ಯದರ್ಶಿಯ ಸಹಿ ಕೂಡ ಆಗಿಲ್ಲ. ಅವರ ಸಹಿ ಇಲ್ಲದೇ ಸರ್ಕಾರ ಅದನ್ನು ಹೇಗೆ ಸ್ವೀಕರಿಸುವುದಕ್ಕೆ ಸಾಧ್ಯ. ಸಹಿ ಇಲ್ಲದ ವರದಿಯನ್ನು ಸ್ವೀಕರಿಸುವುದಾಗಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಇದಕ್ಕೆ ಒಕ್ಕಲಿಗ ಸಮುದಾಯ ವಿರೋಧವಿದೆ’ ಎಂದು ಹೇಳಿದರು.
‘ರಾಜ್ಯದಲ್ಲಿರುವ ಒಕ್ಕಲಿಗ ಸಮುದಾಯದ ಶೇ 40–50 ರಷ್ಟು ಮನೆಗಳಿಗೆ ಹೋಗಿಲ್ಲ. ಇನ್ಯಾವ ಯಾವ ಆಧಾರದ ಮೇಲೆ ವರದಿ ಸಿದ್ಧಪಡಿಸಿದ್ದಾರೂ ಗೊತ್ತಿಲ್ಲ? ಒಕ್ಕಲಿಗ ಸಮುದಾಯವನ್ನು ಒಡೆಯುವ ಉದ್ದೇಶದಿಂದ ಈ ಜಾತಿ ಗಣತಿಯ ವರದಿಯನ್ನು ಸಿದ್ಧಪಡಿಸಲಾಗಿದೆ. ಆದ್ದರಿಂದ, ಕಾಂತರಾಜ ವರದಿಯನ್ನು ತಿರಸ್ಕರಿಸಿ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಮತ್ತೊಮ್ಮೆ ನೈಜ ಜಾತಿಗಣತಿ ನಡೆಸಬೇಕು’ ಎಂದು ಒತ್ತಾಯಿಸಿದರು.
Highlights - null
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.