ADVERTISEMENT

ಡೆಂಗಿ ಪರೀಕ್ಷೆಗೆ ತಲಾ ₹ 300 ನಿಗದಿ: ಆರೋಗ್ಯ ಇಲಾಖೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 16:21 IST
Last Updated 3 ಜುಲೈ 2024, 16:21 IST
ಡೆಂಗಿ ಹರಡುವ ಈಡಿಸ್ ಸೊಳ್ಳೆ
ಡೆಂಗಿ ಹರಡುವ ಈಡಿಸ್ ಸೊಳ್ಳೆ   

ಬೆಂಗಳೂರು: ಆರೋಗ್ಯ ಇಲಾಖೆಯು ಡೆಂಗಿ ಪರೀಕ್ಷೆಗೆ ಸಂಬಂಧಿಸಿದಂತೆ ಖಾಸಗಿ ಆಸ್ಪತ್ರೆಗಳು ಹಾಗೂ ಪ್ರಯೋಗಾಲಯಗಳಿಗೆ ದರ ನಿಗದಿಪಡಿಸಿ ಬುಧವಾರ ಆದೇಶ ಹೊರಡಿಸಿದೆ.

ಎಲಿಸಾ ಎನ್ಎಸ್‌ 1 ಪರೀಕ್ಷೆಗೆ ₹ 300, ಎಲಿಸಾ ಐಜಿಎಂ ಪರೀಕ್ಷೆಗೆ ₹ 300 ನಿಗದಿಪಡಿಸಲಾಗಿದೆ. ‘ರ್‍ಯಾಪಿಡ್‌ ಕಾರ್ಡ್’ ಪರೀಕ್ಷೆಗೆ ₹ 250 ಗೊತ್ತುಪಡಿಸಲಾಗಿದೆ. ಇದಕ್ಕಿಂತ ಅಧಿಕ ಹಣ ಪಡೆದಲ್ಲಿ ಕಾನೂನಿನ ಅಡಿ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ. 

ಡೆಂಗಿ ಉಲ್ಬಣದ ಬೆನ್ನಲ್ಲೇ ಖಾಸಗಿ ಆಸ್ಪತ್ರೆಗಳು ಪರೀಕ್ಷೆಗಳಿಗೆ ಅಧಿಕ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಇಲಾಖೆಗೆ ದೂರುಗಳು ಬಂದಿದ್ದವು. ಡೆಂಗಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಜತೆಗೆ ಮಂಗಳವಾರ ಸಭೆ ನಡೆಸಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಖಾಸಗಿ ಆಸ್ಪತ್ರೆಗಳಲ್ಲಿ ಪರೀಕ್ಷೆಗೆ ದರ ನಿಗದಿಪಡಿಸಿ ಆದೇಶ ಹೊರಡಿಸಲು ಸೂಚಿಸಿದ್ದರು.

ADVERTISEMENT

ಸರ್ಕಾರದ ಜೊತೆಗೆ ಕೈಜೋಡಿಸಿ: ‘ಡೆಂಗಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಖಾಸಗಿ ಆಸ್ಪತ್ರೆಗಳು ಸರ್ಕಾರದ ಜೊತೆಗೆ ಕೈಜೋಡಿಸಬೇಕು. ಕಾಲ ಕಾಲಕ್ಕೆ ಹೊರಡಿಸುವ ಆದೇಶಗಳನ್ನು ಪಾಲಿಸಬೇಕು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ‘ಎಕ್ಸ್‌’ನಲ್ಲಿ ಮನವಿ ಮಾಡಿಕೊಂಡಿದ್ದಾರೆ.

‘ಈಡಿಸ್ ಜಾತಿಯ ಸೊಳ್ಳೆಗಳ ಕಡಿತದಿಂದ ಈ ಜ್ವರವು ಕಾಣಿಸಿಕೊಳ್ಳುತ್ತದೆ. ಜ್ವರದ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು. ಶಂಕಿತ ಡೆಂಗಿ ಜ್ವರ ಪ್ರಕರಣಗಳ ಪರೀಕ್ಷೆ ಹಾಗೂ ಚಿಕಿತ್ಸೆಯು ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಿರುತ್ತದೆ’ ಎಂದು ಹೇಳಿದ್ದಾರೆ. 

ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ರಾಜ್ಯದಲ್ಲಿ ಬುಧವಾರ 13 ಡೆಂಗಿ ಪ್ರಕರಣಗಳು ದೃಢಪಟ್ಟಿವೆ. ಒಟ್ಟು ಪ್ರಕರಣಗಳ ಸಂಖ್ಯೆ 6,390ಕ್ಕೆ ಏರಿಕೆಯಾಗಿದೆ.

Quote - ಹೆಚ್ಚುತ್ತಿರುವ ಡೆಂಗಿ ಪ್ರಕರಣಗಳನ್ನು ನಿರ್ವಹಿಸಲು ಖಾಸಗಿ ಆಸ್ಪತ್ರೆಗಳು ಜವಾಬ್ದಾರಿಯಿಂದ ವರ್ತಿಸಬೇಕು. ಈ ಸಂದರ್ಭವನ್ನು ಲಾಭಗಳಿಸುವ ಅವಕಾಶವನ್ನಾಗಿ ಮಾಡಿಕೊಳ್ಳಬಾರದು ।ದಿನೇಶ್ ಗುಂಡೂರಾವ್ ಆರೋಗ್ಯ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.