ADVERTISEMENT

ಡೆಂಗಿ | ರಾಜ್ಯದಲ್ಲಿ ಹೊಸದಾಗಿ 159 ಪ್ರಕರಣ ದೃಢ: ಈವರೆಗೆ ಆರು ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 17:56 IST
Last Updated 7 ಜುಲೈ 2024, 17:56 IST
ಭಾರತದಲ್ಲಿ ಮೂರು ಜೈಕಾ ವೈರಸ್ ಪ್ರಕರಣ ದೃಢ
ಭಾರತದಲ್ಲಿ ಮೂರು ಜೈಕಾ ವೈರಸ್ ಪ್ರಕರಣ ದೃಢ   

ಬೆಂಗಳೂರು: ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಭಾನುವಾರ 159 ಡೆಂಗಿ ಪ್ರಕರಣಗಳು ದೃಢಪಟ್ಟಿವೆ.

ಡೆಂಗಿ ಪತ್ತೆ ಸಂಬಂಧ 24 ಗಂಟೆಗಳಲ್ಲಿ 954 ಪರೀಕ್ಷೆಗಳನ್ನು ನಡೆಸಲಾಗಿತ್ತು. ಹೊಸದಾಗಿ ಡೆಂಗಿ ಪೀಡಿತರಾದವರಲ್ಲಿ ಮೂವರು ಒಂದು ವರ್ಷದೊಳಗಿನವರಾದರೆ, 48 ಮಂದಿ ಒಂದರಿಂದ 18 ವರ್ಷದೊಳಗಿನವರಾಗಿದ್ದಾರೆ. 108 ಮಂದಿ 18 ವರ್ಷ ಮೇಲ್ಪಟ್ಟವರಾಗಿದ್ದಾರೆ. 

ಸದ್ಯ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 301 ಡೆಂಗಿ ಪೀಡಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ವರ್ಷ ವರದಿಯಾದ ಒಟ್ಟು ಡೆಂಗಿ ಪ್ರಕರಣಗಳ ಸಂಖ್ಯೆ 7,165ಕ್ಕೆ ಏರಿಕೆಯಾಗಿದೆ. ಡೆಂಗಿ ಪೀಡಿತರಲ್ಲಿ ಈವರೆಗೆ ಆರು ಮಂದಿ ಮೃತಪಟ್ಟಿದ್ದಾರೆ.

ADVERTISEMENT

ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸದಾಗಿ 80 ಪ್ರಕರಣಗಳು ದೃಢಪಟ್ಟಿವೆ. ಇದರಿಂದಾಗಿ ಒಟ್ಟು ಪ್ರಕರಣಗಳ ಸಂಖ್ಯೆ 1,988ಕ್ಕೆ ತಲುಪಿದೆ. ಡೆಂಗಿ ಪೀಡಿತರಲ್ಲಿ ಸದ್ಯ 130 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

‘ರಾಜ್ಯದಲ್ಲಿ ಹೆಚ್ಚುತ್ತಿರುವ ಡೆಂಗಿ ಪ್ರಕರಣ ತಡೆಗಟ್ಟಲು ಆರೋಗ್ಯ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಂಡಿದೆ. ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಮನೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಅಗತ್ಯ ಬಿದ್ದಲ್ಲಿ ಈಡಿಸ್ ಸೊಳ್ಳೆಗಳ ನಿಯಂತ್ರಣಕ್ಕೆ ಔಷಧ ಸಿಂಪಡಿಸುತ್ತಿದ್ದಾರೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

‘ಪ್ಯಾರಸಿಟಮಾಲ್’ ದಾಸ್ತಾನು

‘ಡೆಂಗಿ ಜ್ವರ ನಿಯಂತ್ರಿಸಲು ಸಹಕಾರಿಯಾಗಿರುವ ‘ಪ್ಯಾರಸಿಟಮಾಲ್’ ಅಗತ್ಯ ಪ್ರಮಾಣದಲ್ಲಿ ದಾಸ್ತಾನು ಇದೆ. ವೈದ್ಯಕೀಯ ಸಂಸ್ಥೆಗಳಿಂದ 8.72 ಕೋಟಿ ಪ್ಯಾರಸಿಟಮಾಲ್ 650 ಎಂ.ಜಿ ಮಾತ್ರೆಗಳಿಗೆ ಬೇಡಿಕೆ ಬಂದಿತ್ತು. ಈ ಔಷಧವನ್ನು ಸರಬರಾಜು ಮಾಡಲಾಗಿದೆ. ರಾಜ್ಯದ ಎಲ್ಲ ಔಷಧ ಉಗ್ರಾಣಗಳಲ್ಲಿ ಜುಲೈ 4ಕ್ಕೆ ಅನ್ವಯಿಸಿದಂತೆ 3.7 ಕೋಟಿ ಮಾತ್ರೆಗಳು ಲಭ್ಯವಿವೆ. ರಾಜ್ಯದ ವಿವಿಧ ವೈದ್ಯಕೀಯ ಸಂಸ್ಥೆಗಳಲ್ಲಿ ಜುಲೈ 6ಕ್ಕೆ ಅನ್ವಯಿಸಿದಂತೆ 3.18 ಕೋಟಿ ಮಾತ್ರೆಗಳ ದಾಸ್ತಾನು ಇದೆ’ ಎಂದು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ (ಕೆಎಸ್‌ಎಂಎಸ್‌ಸಿಎಲ್‌) ತಿಳಿಸಿದೆ.  

‘ಮಕ್ಕಳಿಗೆ ನೀಡಬಹುದಾದ ಪ್ಯಾರಸಿಟಮಾಲ್ 250ಎಂ.ಜಿ /5 ಎಂಎಲ್ ಔಷಧಕ್ಕೆ ಸಂಬಂಧಿಸಿದಂತೆ ಔಷಧ ಉಗ್ರಾಣಗಳಲ್ಲಿ 5.76 ಲಕ್ಷ ಬಾಟಲ್‌ಗಳು, ವಿವಿಧ ವೈದ್ಯಕೀಯ ಸಂಸ್ಥೆಗಳಲ್ಲಿ 3.86 ಲಕ್ಷ ಬಾಟಲ್‌ಗಳು ಲಭ್ಯವಿವೆ. ಕ್ರಮವಾಗಿ ಪ್ಯಾರಸಿಟಮಾಲ್ ಸಿರಪ್ 250ಎಂ.ಜಿ /5 ಔಷಧವು 27.28 ಲಕ್ಷ ಹಾಗೂ 5.81 ಲಕ್ಷ ಬಾಟಲ್‌ಗಳು ದಾಸ್ತಾನು ಇವೆ. ಬಾಯಿಗೆ ಹಾಕುವ ಪ್ಯಾರಸಿಟಮಾಲ್ ಹನಿ ಒಟ್ಟು 6.90 ಲಕ್ಷ ಬಾಟಲಿಗಳು ಲಭ್ಯವಿವೆ. ಪ್ಯಾರಸಿಟಮಾಲ್ 500 ಎಂ.ಜಿ ಮಾತ್ರೆ 10.04 ಕೋಟಿ ದಾಸ್ತಾನು ಇದೆ’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.