ಬೆಂಗಳೂರು:ನಗರಗಳ ವಾಸ್ತುಶಿಲ್ಪ ಮತ್ತು ಕಟ್ಟಡಗಳ ಒಳಾಂಗಣ ವಿನ್ಯಾಸದ ಹೊಸ ಸಾಧ್ಯತೆಗಳನ್ನು ಪರಿಚಯಿಸುವ ‘ಡಿಸೈನೂರು 2.0’ ವಸ್ತು ಪ್ರದರ್ಶನ ಮೇಳವನ್ನು ಭಾನುವಾರ ಉದ್ಘಾಟಿಸಲಾಯಿತು.
ಬಿಬಿಎಂಪಿ, ಬಿಎಂಆರ್‌ಸಿಎಲ್, ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ ಭಾರತೀಯ ಒಳಾಂಗಣ ವಿನ್ಯಾಸಗಾರರ ಸಂಸ್ಥೆ (ಐಐಐಡಿ) ಈ ಮೇಳವನ್ನು ಆಯೋಜಿಸಿದೆ.
ಮೇಳ ಉದ್ಘಾಟಿಸಿದ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ‘ನಗರದ ಸೌಂದರ್ಯವನ್ನು ಹೆಚ್ಚಿಸುವ ಮತ್ತು ಮನುಷ್ಯ ಜೀವನವನ್ನು ಹೊಸದಾಗಿಸುವ ನಿಟ್ಟಿನಲ್ಲಿ ಹೊಸ ವಿನ್ಯಾಸದ ಅಗತ್ಯವಿದೆ’ ಎಂದರು.
ಐಐಐಡಿ ಸದಸ್ಯ ಸತೀಶ್ ದಾಸ್, ‘ಜೀವನದಲ್ಲಿ ಹೊಸ ವಿನ್ಯಾಸ ಯಾವ ರೀತಿ ಪ್ರಭಾವ ಬೀರುತ್ತದೆ ಎಂಬುದರ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ‘ಡಿಸೈನೂರು’ ಕಾರ್ಯಕ್ರಮ ಏರ್ಪಡಿಸಲಾಗಿದೆ’ ಎಂದರು.
ಎಂ.ಜಿ. ರಸ್ತೆಯ ರಂಗೋಲಿ ಮೆಟ್ರೊ ಕಲಾಕೇಂದ್ರದಲ್ಲಿ ನಡೆಯುತ್ತಿರುವ ಈ ಮೇಳದಲ್ಲಿಒಳಾಂಗಣ ವಿನ್ಯಾಸಗಾರರು ಮತ್ತು ವಿದ್ಯಾರ್ಥಿಗಳು ನಗರದ ಅಭಿವೃದ್ಧಿಯಲ್ಲಿ ಹೊಸ ವಿನ್ಯಾಸದ ಪಾತ್ರದ ಕುರಿತು ರೂಪಿಸಿದ ಮಾದರಿಗಳ ಪ್ರದರ್ಶನ ನಡೆಯುತ್ತಿದೆ.
‘ಸಂವಾದದಿಂದ ಸಂರಕ್ಷಣೆ’ ಘೋಷವಾಕ್ಯದಡಿ ಏಳು ದಿನ ನಡೆಯುವ ಈ ಪ್ರದರ್ಶನದಲ್ಲಿ ವೃತ್ತಿಪರರು, ಉದ್ಯಮಿಗಳು, ಕಲಾವಿದರು ಹಾಗೂ ಸರ್ಕಾರಿ ಅಧಿಕಾರಿಗಳು ಹೊಸ ವಿನ್ಯಾಸಗಳ ಕುರಿತು ಸಂವಾದ ನಡೆಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.