ಬೆಂಗಳೂರು: ‘ದೇವದಾಸಿ ಪದ್ಧತಿಯನ್ನು ಅಪರಾಧವೆಂದು ಸಮಾಜ ಪರಿಗಣಿಸಬೇಕು’ ಎಂದು ದಲಿತ ಸಂಘರ್ಷ ಸಮಿತಿಯ ಮುಖಂಡ ಇಂದೂಧರ ಹೊನ್ನಾಪುರ ಹೇಳಿದರು.
ವಿಮುಕ್ತ ದೇವದಾಸಿ ಮಹಿಳಾ ವೇದಿಕೆ ಸೋಮವಾರ ಆಯೋಜಿಸಿದ್ದ ‘ವಿಮುಕ್ತ ದನಿ’ ಪತ್ರಿಕೆ ಹಾಗೂ ದೇವದಾಸಿಯರ ಜೀವನ ಕುರಿತ ಸಾಕ್ಷ್ಯಚಿತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪೌರ ಕಾರ್ಮಿಕರ ಸಮಸ್ಯೆಗಳ ಪರಿಹಾರ ಮತ್ತು ದೇವದಾಸಿ ಪದ್ಧತಿಯನ್ನು ನಿರ್ಮೂಲನೆಗೆ ದಲಿತ ಚಳವಳಿ ಆದ್ಯತೆ ನೀಡಬೇಕಿತ್ತು. ರಾಜ್ಯದಲ್ಲಿ ದೇವದಾಸಿ ಪದ್ಧತಿ ಇಂದಿಗೂ ಚಾಲ್ತಿಯಲ್ಲಿದೆ. ದೇವದಾಸಿ ಎಂಬ ಅನಿಷ್ಠ ಪದ್ಧತಿಯನ್ನು ಹೋಗಲಾಡಿಸಲು ಕಠಿಣ ಕಾನೂನು ಜಾರಿಗೊಳಿಸಬೇಕು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗುವುದು’ ಎಂದರು.
‘ರಾಜ್ಯದಲ್ಲಿ ದಲಿತರ ಪರವಾಗಿರುವ ಎಲ್ಲ ಕಾಯ್ದೆ–ಕಾನೂನುಗಳು ದಲಿತ ಚಳವಳಿಗಳ ಫಲದಿಂದ ಬಂದಿವೆ. ದಲಿತ ರಾಜಕಾರಣಿಗಳು ಚುನಾವಣೆ ಪೂರ್ವದಲ್ಲಿ ಸಮುದಾಯ ಅಭಿವೃದ್ಧಿಗೆ ಕೆಲಸ ಮಾಡುವ ಭರವಸೆ ನೀಡುತ್ತಾರೆ. ಆದರೆ, ಚುನಾವಣೆಯಲ್ಲಿ ಆಯ್ಕೆಯಾದ ನಂತರ ಸರ್ಕಾರ ಮತ್ತು ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ದೂರಿದರು.
ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಮಾತನಾಡಿ, ‘ನಾನು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ದೇವದಾಸಿ ಹೆಣ್ಣುಮಕ್ಕಳಿಗೆ ಅಂಗನವಾಡಿ ಕಾರ್ಯಕರ್ತೆಯರು, ಸರ್ಕಾರಿ ಕಚೇರಿಗಳಲ್ಲಿ ಸಹಾಯಕರು ಮತ್ತು ಪೊಲೀಸ್ ಇಲಾಖೆಯಲ್ಲಿನ ಹುದ್ದೆಗಳಲ್ಲಿ ಅವಕಾಶ ನೀಡಲಾಗಿತ್ತು. ಅಂತರ್ಜಾತಿ ವಿವಾಹವಾಗುವ ಜೋಡಿಗಳಿಗೆ ಸರ್ಕಾರದಿಂದ ಸಹಾಯಧನ ನೀಡಲಾಗುತ್ತದೆ. ಅದರಂತೆ ದೇವದಾಸಿಯರು ಮದುವೆಯಾದರೆ ಅವರಿಗೂ ಈ ಸಹಾಯಧನ ನೀಡಬೇಕು’ ಎಂದರು.
ಸಿ. ದಾನಪ್ಪ ನಿಲೋಗಲ್, ಲೇಖಕಿ ದು. ಸರಸ್ವತಿ, ವೈ.ಜೆ. ರಾಜೇಂದ್ರ, ಅಲ್ಲಾಗಿರಿರಾಜ್, ಎಂ.ಆರ್. ಭೇರಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.