ADVERTISEMENT

ದೇವದುರ್ಗ ಕ್ಷೇತ್ರದ ಜೆಡಿಎಸ್‌ ಶಾಸಕಿ ಕರೆಮ್ಮಗೆ ‘ಸಮಾಜರತ್ನ ಪ್ರಶಸ್ತಿ’ ಪ್ರದಾನ

​ಪ್ರಜಾವಾಣಿ ವಾರ್ತೆ
Published 28 ಜೂನ್ 2023, 15:49 IST
Last Updated 28 ಜೂನ್ 2023, 15:49 IST
ಕಾರ್ಯಕ್ರಮದಲ್ಲಿ ಕರೆಮ್ಮ ಜಿ. ನಾಯಕ್ ಅವರಿಗೆ ‘ಯಶೋಧರಮ್ಮ ದಾಸಪ್ಪ ಸಮಾಜರತ್ನ ಪ್ರಶಸ್ತಿ’ಯನ್ನು ಬಿ.ಟಿ. ಲಲಿತಾ ನಾಯಕ್ ಪ್ರದಾನ ಮಾಡಿದರು. 
ಕಾರ್ಯಕ್ರಮದಲ್ಲಿ ಕರೆಮ್ಮ ಜಿ. ನಾಯಕ್ ಅವರಿಗೆ ‘ಯಶೋಧರಮ್ಮ ದಾಸಪ್ಪ ಸಮಾಜರತ್ನ ಪ್ರಶಸ್ತಿ’ಯನ್ನು ಬಿ.ಟಿ. ಲಲಿತಾ ನಾಯಕ್ ಪ್ರದಾನ ಮಾಡಿದರು.    

ಬೆಂಗಳೂರು: ಕನ್ನಡ ಜನಶಕ್ತಿ ಕೇಂದ್ರ ನಗರದಲ್ಲಿ ಬುಧವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ  ದೇವದುರ್ಗ ಕ್ಷೇತ್ರದ ಜೆಡಿಎಸ್‌ ಶಾಸಕಿ ಕರೆಮ್ಮ ಜಿ.ನಾಯಕ್ ಅವರಿಗೆ ‘ಯಶೋಧರಮ್ಮ ದಾಸಪ್ಪ ಸಮಾಜರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು. 

ಈ ಪ್ರಶಸ್ತಿಯು ₹ 10 ಸಾವಿರ ನಗದು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಮಾಡಿದ ಲೇಖಕಿ ಬಿ.ಟಿ. ಲಲಿತಾ ನಾಯಕ್, ‘ಅತ್ಯಂತ ಹಿಂದುಳಿದ ಪ್ರದೇಶದಿಂದ ಆಯ್ಕೆಯಾಗಿರುವ ಕರೆಮ್ಮ, ಈಗಾಗಲೇ ಹಲವು ಸಮಾಜಮುಖಿ ಕಾರ್ಯ ಕೈಗೊಂಡಿದ್ದಾರೆ. ನಾನು ಸಚಿವನಾಗಿದ್ದ ಅವಧಿಯಲ್ಲಿ ಆ ಭಾಗದಲ್ಲಿ ಸಾಕಷ್ಟು ಜನಪರ ಕೆಲಸಗಳನ್ನು ಕೈಗೊಂಡಿದ್ದೆ’ ಎಂದು ಹೇಳಿದರು. 

ಕರೆಮ್ಮ ಜಿ. ನಾಯಕ್, ‘2005ರಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ ಮೂಲಕ ರಾಜಕೀಯ ಪ್ರವೇಶಿಸಿದೆ. ದೇವೇಗೌಡರು ನನ್ನನ್ನು ಗುರುತಿಸಿ, ವಿಧಾನಸಭೆ ಉಪಚುನಾವಣೆಯಲ್ಲಿ ಟಿಕೆಟ್‌ ನೀಡಿದಾಗ ಅಲ್ಪ ಅಂತರದಲ್ಲಿ ಸೋಲನ್ನು ಕಂಡಿದ್ದೆ. ಕ್ಷೇತ್ರದಲ್ಲಿ ಜನರಿಗೆ ಸ್ಪಂದಿಸಿದ್ದರಿಂದ ಈ ಬಾರಿ ಅಭೂತಪೂರ್ವ ಗೆಲುವು ಕಂಡೆ. ನಾನು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರ ಎಲ್ಲಾ ರಂಗದಲ್ಲಿಯೂ ಹಿಂದುಳಿದಿದ್ದು, ಇಲ್ಲಿನ ಅಭಿವೃದ್ಧಿಗೆ ಪಣ ತೊಡುತ್ತೇನೆ’ ಎಂದರು.

ADVERTISEMENT

ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ. ರಾಮೇಗೌಡ, ‘ಯಶೋಧರಮ್ಮ ದಾಸಪ್ಪ ಅವರ ಜೀವನಾದರ್ಶಗಳನ್ನು ಪಾಲಿಸಿಕೊಂಡು ಬರುತ್ತಿರುವ, ತನ್ಮೂಲಕ ಅವರ ನೆನಪುಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುತ್ತಿರುವ ಮಹಿಳೆಯೊಬ್ಬರಿಗೆ ಪ್ರತಿ ವರ್ಷ ಈ ಪ್ರಶಸ್ತಿ ನೀಡಲಾಗುತ್ತಿದೆ’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.