ADVERTISEMENT

ಕುಂಟುತ್ತಾ ಸಾಗಿದೆ ಕನ್ನಡ ಭಾಷೆಯ ಬೆಳವಣಿಗೆ: ಪುರುಷೋತ್ತಮ ಬಿಳಿಮಲೆ ಕಳವಳ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಕಳವಳ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 15:43 IST
Last Updated 27 ಅಕ್ಟೋಬರ್ 2024, 15:43 IST
ಪುರೋಷತ್ತಮ ಬಿಳಿಮಲೆ ಅವರು ಚಂಡೆ ಬಾರಿಸುವ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿದರು. ಆರ್.ಎ. ಪ್ರಸಾದ್, ಲೇಖಕಿ ಡಾ. ವಸುಂಧರಾ ಭೂಪತಿ ಹಾಗೂ ಎಂ. ನಾಗರಾಜ್ ಯಾದವ್ ಉಪಸ್ಥಿತರಿದ್ದರು.
ಪುರೋಷತ್ತಮ ಬಿಳಿಮಲೆ ಅವರು ಚಂಡೆ ಬಾರಿಸುವ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿದರು. ಆರ್.ಎ. ಪ್ರಸಾದ್, ಲೇಖಕಿ ಡಾ. ವಸುಂಧರಾ ಭೂಪತಿ ಹಾಗೂ ಎಂ. ನಾಗರಾಜ್ ಯಾದವ್ ಉಪಸ್ಥಿತರಿದ್ದರು.   

ಬೆಂಗಳೂರು: ‘ದೇಶದ ವಿವಿಧ ರಾಜ್ಯ ಭಾಷೆಗಳ ಬೆಳವಣಿಗೆಗೆ ಹೋಲಿಸಿದರೆ ಕನ್ನಡ ಭಾಷೆಯು ಕುಂಟುತ್ತಾ ಸಾಗಿದೆ. ನಮ್ಮ ಭಾಷೆಯ ಬೆಳವಣಿಗೆ ಹೀಗೆಯೇ ಸಾಗಿದರೆ ಭವಿಷ್ಯದಲ್ಲಿ ಕನ್ನಡವು ಆಡು ಭಾಷೆಯಾಗಿ ಮಾತ್ರ ಉಳಿಯಲಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಕಳವಳ ವ್ಯಕ್ತಪಡಿಸಿದರು. 

ಕನ್ನಡ ಗಣಕ ಉಚಿತ ತರಬೇತಿ ಕೇಂದ್ರ ನಗರದಲ್ಲಿ ಭಾನುವಾರ ಹಮ್ಮಿಕೊಂಡ ‘ಕನ್ನಡ ತಂತ್ರಾಂಶ ಬಳಕೆಯಲ್ಲಿ ಸಾರ್ವಜನಿಕರು ಮತ್ತು ಸರ್ಕಾರದ ಪಾತ್ರ’ ಸಮಾವೇಶ ಉದ್ಘಾಟಿಸಿ, ಮಾತನಾಡಿದರು. 

‘2011ರ ಜನಗಣತಿ ಪ್ರಕಾರ ಕಳೆದ 40 ವರ್ಷಗಳಿಗೆ ಹೋಲಿಸಿದಲ್ಲಿ ಹಿಂದಿ ಭಾಷೆ ಶೇ 66 ರಷ್ಟು ವೇಗದಲ್ಲಿ ಬೆಳವಣಿಗೆ ಹೊಂದುತ್ತಿದೆ. ತಮಿಳು, ತೆಲುಗು, ಮಲಯಾಳಂ, ಕಾಶ್ಮೀರಿ ಸೇರಿ ವಿವಿಧ ಭಾಷೆಗಳು ಶೇ 8ರಿಂದ ಶೇ 9ರಷ್ಟು, ಇಲ್ಲಿಯದೇ ಭಾಷೆಯಾದ ತುಳು ಶೇ 7ರಷ್ಟು ವೇಗದಲ್ಲಿ ಬೆಳವಣಿಗೆಯಾಗುತ್ತಿದೆ. ಆದರೆ, ಕನ್ನಡ ಭಾಷೆಯ ಬೆಳವಣಿಗೆ ಶೇ 3.73 ರಷ್ಟು ಮಾತ್ರ ಇದೆ. ಇಡೀ ಭಾರತದಲ್ಲಿ ಅತ್ಯಂತ ಕಡಿಮೆ ವೇಗದಲ್ಲಿ ಬೆಳೆಯುತ್ತಿರುವ ರಾಜ್ಯ ಭಾಷೆ ಇದಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು. 

ADVERTISEMENT

‘ಕನ್ನಡ ನಮ್ಮ ಹೃದಯ ಭಾಷೆಯಾಗದ ಹೊರತು ಬೆಳವಣಿಗೆ ಸಾಧ್ಯವಿಲ್ಲ. ಉದ್ಯೋಗ, ಶಿಕ್ಷಣ ಸೇರಿ ವಿವಿಧೆಡೆ ಕನ್ನಡ ಅನುಷ್ಠಾನದ ತೀರ್ಮಾನವನ್ನು ರಾಜ್ಯ ಸರ್ಕಾರ ಕೈಗೊಂಡರೆ, ಸುಪ್ರೀಂ ಕೋರ್ಟ್ ಅದಕ್ಕೆ ತಡೆಯೊಡ್ಡಲಿದೆ. ಜಾಗತೀಕರಣದಿಂದ ಕನ್ನಡಕ್ಕೆ ಅಸ್ತಿತ್ವ ಇಲ್ಲವಾಗಿದೆ’ ಎಂದರು.

ವಿಧಾನ ಪರಿಷತ್ತಿನ ಸದಸ್ಯ ಎಂ. ನಾಗರಾಜ್ ಯಾದವ್, ‘ಭಾಷೆ ಉಳಿಸಲು ತಾಂತ್ರಿಕ ಶಿಕ್ಷಣ, ವೈದ್ಯಕೀಯ ಶಿಕ್ಷಣದಲ್ಲಿ ಕನ್ನಡ ಬಳಕೆಗೆ ಒತ್ತು ನೀಡಬೇಕು. ಕನ್ನಡ ತಂತ್ರಾಂಶ ಬಳಕೆ ಹೆಚ್ಚಬೇಕು’ ಎಂದರು.    

ಕನ್ನಡ ಗಣಕ ಉಚಿತ ತರಬೇತಿ ಕೇಂದ್ರದ ಸಂಸ್ಥಾಪನಾಧ್ಯಕ್ಷ ಆರ್.ಎ. ಪ್ರಸಾದ್, ‘ಕನ್ನಡ ತಂತ್ರಾಂಶವನ್ನು ಆಡಳಿತದಲ್ಲಿ ಜಾರಿ ಮಾಡದಿದ್ದರೆ ಕನ್ನಡ ಕೀಳು ಮಟ್ಟಕ್ಕೆ ತಲುಪಲಿದೆ. ಎಲ್ಲ ಭಾಷೆಗಳ ತಂತ್ರಾಂಶಗಳನ್ನು ತಯಾರು ಮಾಡಿಕೊಳ್ಳುವ ಉದ್ದಿಮೆ ಕರ್ನಾಟಕದಲ್ಲಿದೆ. ನಮ್ಮ ಭಾಷೆಯ ತಂತ್ರಾಂಶಗಳು ಇದ್ದರೂ ಅವನ್ನು ಬಳಕೆ ಮಾಡುತ್ತಿಲ್ಲ. ಕಡ್ಡಾಯವಾಗಿ ಬಳಕೆ ಮಾಡಿದಲ್ಲಿ 10 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಕನ್ನಡಿಗರಿಗೆ ಸಿಗುತ್ತವೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಇಂಗ್ಲಿಷ್ ಮಾಧ್ಯಮದ ಅಭ್ಯರ್ಥಿಗಳಿಗೆ ಆದ್ಯತೆ ನೀಡುತ್ತಿದೆ. ಸರ್ಕಾರದ ಆಡಳಿತದಲ್ಲಿ ಕನ್ನಡ ಬಳಸದಿರುವುದು ದುರಂತ’ ಎಂದು ಬೇಸರ ವ್ಯಕ್ತಪಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.