ಬೆಂಗಳೂರು: ವಿದ್ಯುನ್ಮಾನ (ಡಿಜಿಟಲ್) ರೂಪದ ‘ಡಿಜಿ ಲಾಕರ್’ ವ್ಯವಸ್ಥೆಯಲ್ಲಿರುವ ದಾಖಲೆಗಳನ್ನು ಪರಿಗಣಿಸುವಂತೆ ನಗರ ಪೊಲೀಸ್ ಕಮಿಷನರ್ ಅಲೋಕ್‌ಕುಮಾರ್, ಸಂಚಾರ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.
ವಾಹನ ಹಾಗೂ ಚಾಲಕರಿಗೆ ಸಂಬಂಧಪಟ್ಟ ದಾಖಲೆಗಳನ್ನು ಡಿಜಿ ಲಾಕರ್ ವ್ಯವಸ್ಥೆಯಲ್ಲಿ ಅಪ್‌ಲೋಡ್ ಮಾಡಲು ಅವಕಾಶವಿದೆ. ವಾಹನಗಳ ತಪಾಸಣೆ ವೇಳೆ ಮಾತ್ರ
ಕೆಲ ಪೊಲೀಸರು, ಡಿಜಿ ಲಾಕರ್‌ನಲ್ಲಿರುವ ದಾಖಲೆಗಳನ್ನು ಪರಿಗಣಿಸುತ್ತಿಲ್ಲ ಎಂಬ ಆರೋಪವಿದೆ.
ಆ ಸಂಬಂಧ ಕಮಿಷನರ್ ಅವರಿಗೆ ಟ್ವೀಟ್ ಮೂಲಕ ದೂರು ನೀಡಿದ್ದ ಲಾಲ್ ಎಂಬುವರು, ‘ದಾಸರಹಳ್ಳಿ ಬಳಿ ನನ್ನ ಬೈಕ್ ತಡೆದಿದ್ದ ಪೊಲೀಸರು, ಡಿಜಿ ಲಾಕರ್‌ನಲ್ಲಿರುವ ದಾಖಲೆ ತೋರಿಸಿದರೂ ಒಪ್ಪಲಿಲ್ಲ. ಕೇಂದ್ರ ಸರ್ಕಾರವೇ ರೂಪಿಸಿರುವ ಡಿಜಿ ಲಾಕರ್ ವ್ಯವಸ್ಥೆ ಬಗ್ಗೆ ಪೊಲೀಸರಿಗೆ ಗೊತ್ತಿಲ್ಲವೇ’ ಎಂದು ಪ್ರಶ್ನಿಸಿದ್ದರು.
ಅದಕ್ಕೆ ಪ್ರತಿಕ್ರಿಯಿಸಿರುವ ಕಮಿಷನರ್ ಅಲೋಕ್‌ಕುಮಾರ್, ‘ಡಿಜಿ ಲಾಕರ್ ವ್ಯವಸ್ಥೆಯಲ್ಲಿರುವ ದಾಖಲೆಗಳನ್ನೂ ಪರಿಶೀಲಿಸುವಂತೆ ಸಂಚಾರ ಪೊಲೀಸರು ನಿರ್ದೇಶನ ನೀಡಲಾಗುವುದು’ ಎಂದು ಹೇಳಿದ್ದಾರೆ.
ಏನಿದು ‘ಡಿಜಿ ಲಾಕರ್’ ವ್ಯವಸ್ಥೆ?: ದಾಖಲೆಗಳು ಹಾಗೂ ಪ್ರಮಾಣಪತ್ರಗಳನ್ನು ವಿದ್ಯುನ್ಮಾನ (ಡಿಜಿಟಲ್) ರೂಪದಲ್ಲಿ ಸಂಗ್ರಹಿಸುವ, ವಿತರಿಸುವ ಮತ್ತು ದೃಢೀಕರಿಸುವ ವ್ಯವಸ್ಥೆಯೇ ‘ಡಿಜಿ ಲಾಕರ್’ (https://digilocker.gov.in).
ಕಾಗದರಹಿತ ಆಡಳಿತ ಪರಿಕಲ್ಪನೆಯ ಡಿಜಿಟಲ್ ಇಂಡಿಯಾ ಯೋಜನೆಯ ಭಾಗವಾಗಿ ಈ ವ್ಯವಸ್ಥೆ ರೂಪಿಸಲಾಗಿದೆ. ಜನರು ದಾಖಲೆಗಳನ್ನು ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ನೋಡಬಹುದು ಹಾಗೂ ಆನ್‌ಲೈನ್‌ನಲ್ಲಿ ಹಂಚಿಕೊಳ್ಳಬಹುದು. ಅಗತ್ಯವಿದ್ದಾಗ ಈ ಡಿಜಿ ಲಾಕರ್‌ನ ದಾಖಲೆಗಳನ್ನು ಪ್ರಸ್ತುಪಡಿಸಬಹುದು. ವಾಹನ ಚಾಲನಾ ಪರವಾನಗಿ (ಡಿಎಲ್) ಮತ್ತು ನೋಂದಣಿ ಪ್ರಮಾಣಪತ್ರಗಳನ್ನು (ಆರ್‌ಸಿ) ಡಿಜಿ ಲಾಕರ್ ವ್ಯವಸ್ಥೆಗೆ ಅಳವಡಿಸಿ, ಅವು ಮೊಬೈಲ್‌ನಲ್ಲಿ ಲಭ್ಯವಾಗುವಂತೆ ಮಾಡಬಹುದಾಗಿದೆ. ಇದು ಸ್ವಯಂ ದೃಢೀಕರಣ ಇದ್ದಂತೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.