ಬೆಂಗಳೂರು: ‘ಬಿಬಿಎಂಪಿ ಶಾಲೆಗಳಲ್ಲಿ ಬೋಧಿಸುತ್ತಿರುವ ಶಿಕ್ಷಕರಲ್ಲಿ ಶೇ 15ರಿಂದ ಶೇ 20ರಷ್ಟು ಜನರಿಗೆ ಸೂಕ್ತ ವಿದ್ಯಾರ್ಹತೆ ಇಲ್ಲ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.
‘ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬಿಬಿಎಂಪಿ ಶಾಲೆಗಳಿಗೆ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರನ್ನು ಒದಗಿಸುತ್ತದೆ. ನಮ್ಮಲ್ಲಿ ಕಾಯಂ ಶಿಕ್ಷಕರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಹೊರಗುತ್ತಿಗೆಯಲ್ಲಿರುವ ಎಲ್ಲ ಶಿಕ್ಷಕರೂ ಮುಂದುವರಿಯುವ ಅರ್ಹತೆ ಹೊಂದಿಲ್ಲ’ ಎಂದು ಸುದ್ದಿಗಾರರಿಗೆ ಸೋಮವಾರ ಮಾಹಿತಿ ನೀಡಿದರು.
‘ನಮ್ಮಲ್ಲಿ ಬೋಧಿಸುತ್ತಿರುವ ಶಿಕ್ಷಕರನ್ನು ಶಿಕ್ಷಣ ಇಲಾಖೆಗೆ ವರ್ಗಾಯಿಸುವ ಸಂದರ್ಭದಲ್ಲಿ ಯಾರು ವಿದ್ಯಾರ್ಹತೆ ಹೊಂದಿಲ್ಲವೋ ಅವರನ್ನು ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದೇವೆ. ನಾವು ಎರಡು ವರ್ಷಗಳಿಂದ ವಿದ್ಯಾರ್ಹತೆ ಇಲ್ಲದ ಶಿಕ್ಷಕರಿಗೆ ವಿನಾಯಿತಿ ನೀಡುತ್ತಿದ್ದೆವು. ಅಂಥವರು ಇಲ್ಲಿ ಬೋಧಿಸುತ್ತಿದ್ದರು. ಇನ್ನು ಮುಂದೆ ಅದು ಸಾಧ್ಯವಿಲ್ಲ’ ಎಂದು ಹೇಳಿದರು.
‘25, 30 ವರ್ಷಗಳವರೆಗೆ ಬೋಧನೆ ಮಾಡಿದ್ದೇವೆ. ವಿದ್ಯಾರ್ಹತೆಯೊಂದೇ ಮಾನದಂಡವಾಗಬಾರದು ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಶಿಕ್ಷಣ ಇಲಾಖೆಯವರು ಬಿ.ಇಡಿ ಮಾಡಿದವರಿಗೆ ಮಾತ್ರ ಮನ್ನಣೆ ನೀಡುವುದಾಗಿ ಹೇಳಿದ್ದಾರೆ’ ಎಂದರು.
‘ಶಿಕ್ಷಕರು ಬೋಧನೆಯನ್ನು ತಿಳಿದುಕೊಳ್ಳದಿದ್ದರೆ ಅವರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವುದಿಲ್ಲ. ಹೀಗಾಗಿ ಶೈಕ್ಷಣಿಕ ಅರ್ಹತೆ ಇಲ್ಲದ ಹೊರಗುತ್ತಿಗೆ ಶಿಕ್ಷಕರನ್ನು ಮುಂದುವರಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.
‘ಪಾಲಿಕೆ ಶಾಲೆಗಳಲ್ಲಿರುವ ಶೇ 15ರಿಂದ ಶೇ 20ರಷ್ಟು ಶಿಕ್ಷಕರನ್ನು ಮುಂದುವರಿಸಲಾಗುತ್ತಿಲ್ಲ. ಇಷ್ಟು ಶಿಕ್ಷಕರನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಮೂಲಕ ತೆಗೆದುಕೊಳ್ಳಲಾಗುತ್ತದೆ. ಬಿಬಿಎಂಪಿ ಶಾಲೆಗಳಲ್ಲಿ ಬೋಧನೆ ಮಾಡುತ್ತಿರುವ ಶಿಕ್ಷಕರಲ್ಲಿ ಯಾರಿಗೆ ವಿದ್ಯಾರ್ಹತೆ ಇದೆಯೋ ಅವರನ್ನು ತೆಗೆಯುವುದು ಬೇಡ ಎಂದು ಎಸ್‌ಡಿಎಂಸಿಗೆ ನಾವು ನಿರ್ದೇಶನ ನೀಡುತ್ತೇವೆ. ಎಸ್‌ಡಿಎಂಸಿ ಮೂಲಕ ಅತಿಥಿ ಶಿಕ್ಷಕರೂ ಬರುವುದರಿಂದ ಅವರೆಲ್ಲ ನಮ್ಮ ಹತೋಟಿಗೆ ಬರುತ್ತಾರೆ’ ಎಂದು ಮಾಹಿತಿ ನೀಡಿದರು.
‘ನರ್ಸರಿ ಶಿಕ್ಷಕರು ಪಾಲಿಕೆಯಲ್ಲಿ ಎಂದಿನಂತೆಯೇ ಮುಂದುವರಿಯಲಿದ್ದಾರೆ’ ಎಂದು ಹೇಳಿದರು.
‘ಬಿಬಿಎಂಪಿ ಪದವಿ ಕಾಲೇಜುಗಳ ಬೋಧಕರನ್ನೂ ಉನ್ನತ ಶಿಕ್ಷಣ ಇಲಾಖೆಯಿಂದ ಒದಗಿಸುವ ಬಗ್ಗೆ ಇಲಾಖೆಯೊಂದಿಗೆ ಶೀಘ್ರವೇ ಚರ್ಚೆ ನಡೆಸಲಾಗುತ್ತದೆ’ ಎಂದು ತುಷಾರ್ ಗಿರಿನಾಥ್ ತಿಳಿಸಿದರು.
ಹೊರಗುತ್ತಿಗೆ ಶಿಕ್ಷಕರನ್ನೇ ಮುಂದುವರಿಸಲು ಆಗ್ರಹ
‘ಬಿಬಿಎಂಪಿ ಶಾಲೆಗಳಲ್ಲಿರುವ ಹೊರಗುತ್ತಿಗೆಯ 764 ಶಿಕ್ಷಕರನ್ನು ಕರ್ತವ್ಯದಲ್ಲಿ ಮುಂದುವರಿಸಿ ಸೇವಾಭದ್ರತೆ ನೀಡಬೇಕು’ ಎಂದು ಬಿಬಿಎಂಪಿ ಹೊರಗುತ್ತಿಗೆ ಶಿಕ್ಷಕರ ಸಂಘದ ಸದಸ್ಯರು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಮನವಿ ಸಲ್ಲಿಸಿದರು. ‘ಕೇಂದ್ರ ಕಚೇರಿಯಲ್ಲಿ ಸೋಮವಾರ ಬೆಳಿಗ್ಗೆ ಪ್ರತಿಭಟನೆ ನಡೆಸಿದ ಶಿಕ್ಷಕರು ‘ಶಿಕ್ಷಣ ವಿಭಾಗದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಕೈಗೊಂಡ ತೀರ್ಮಾನದಿಂದ 764 ಶಿಕ್ಷಕರ ಕುಟುಂಬದವರು ಬೀದಿಗೆ ಬರುತ್ತಾರೆ’ ಎಂದು ಅಳಲು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.