ADVERTISEMENT

ಬಿಬಿಎಂಪಿ: ಆಸ್ತಿ ಮಾಲೀಕರಿಗೆ ತಿಂಗಳಾಂತ್ಯಕ್ಕೆ ‘ಡಿಜಿಟಲ್‌ ಖಾತಾ’

ಕರಡು ಇ–ಖಾತಾ ಆನ್‌ಲೈನ್‌ನಲ್ಲಿ ಲಭ್ಯ; ಆಕ್ಷೇಪಣೆಗೆ ಒಂದು ತಿಂಗಳು ಅವಕಾಶ

ಆರ್. ಮಂಜುನಾಥ್
Published 13 ಸೆಪ್ಟೆಂಬರ್ 2024, 0:30 IST
Last Updated 13 ಸೆಪ್ಟೆಂಬರ್ 2024, 0:30 IST
   

ಬೆಂಗಳೂರು: ನಗರದ ಆಸ್ತಿ ಮಾಲೀಕರಿಗೆ ‘ಭೂ ಆಧಾರ್’ ದಾಖಲೆಯಂತೆ ಪರಿಗಣಿಸಲಾಗುವ ಡಿಜಿಟಲ್‌ ಖಾತಾ ಅಥವಾ ಇ–ಖಾತಾ ಸೆಪ್ಟೆಂಬರ್ ಅಂತ್ಯದೊಳಗೆ ಲಭ್ಯವಾಗಲಿದೆ.

ರಾಜ್ಯದ ಗ್ರಾಮಾಂತರ ಪ್ರದೇಶಗಳಲ್ಲಿ ಆಸ್ತಿಯ ಖಾತಾ ಆನ್‌ಲೈನ್‌ನಲ್ಲಿ ಲಭ್ಯವಾಗುತ್ತಿದ್ದರೂ, ಈ ವ್ಯವಸ್ಥೆಯಿಂದ ಬಿಬಿಎಂಪಿ ಹಿಂದೆ ಉಳಿದಿತ್ತು. ನಗರದ ಆಸ್ತಿ ಮಾಲೀಕರಿಗೂ ಇ–ಖಾತಾ ನೀಡುವ ಉದ್ದೇಶದಿಂದ ಒಂದು ವರ್ಷದಿಂದ ಪ್ರಕ್ರಿಯೆ ಆರಂಭವಾಗಿತ್ತು. ಇದೀಗ ಅಂತಿಮ ಹಂತದಲ್ಲಿದ್ದು, 20 ಲಕ್ಷ ಆಸ್ತಿಗಳ ಇ–ಖಾತಾ ಸಿದ್ಧಗೊಳ್ಳುತ್ತಿದೆ. ಆಸ್ತಿಗಳ ಎಲ್ಲ ಮಾಹಿತಿಗಳನ್ನೂ ಡಿಜಿಟಲೀಕರಣ ಮಾಡಲಾಗಿದೆ.

ಕರಡು ಇ–ಖಾತಾಗಳಲ್ಲಿ ಆಸ್ತಿಯ ಚಿತ್ರ ಸೇರಿದಂತೆ ಅಕ್ಷಾಂಶ, ರೇಖಾಂಶವನ್ನೂ ದಾಖಲಿಸಲಾಗುತ್ತಿದೆ. ಇದು ಸೆಪ್ಟೆಂಬರ್‌ ಅಂತ್ಯದೊಳಗೆ ಆನ್‌ಲೈನ್‌ನಲ್ಲಿ ಲಭ್ಯವಾಗುತ್ತದೆ. ನಗರ ಆಸ್ತಿ ಮಾಲೀಕತ್ವ ದಾಖಲೆ (ಯುಪಿಒಆರ್‌) ಯೋಜನೆಯಡಿ ಈಗಾಗಲೇ ಸಂಗ್ರಹಿಸಲಾಗಿರುವ ವಿವರಗಳನ್ನೂ ಬಿಬಿಎಂಪಿ ಇ–ಖಾತಾದಲ್ಲಿ ಅಳವಡಿಸುತ್ತಿದೆ.

ADVERTISEMENT

ಆಸ್ತಿ ಮಾಲೀಕರಿಗೆ ಕರಡು ಇ–ಖಾತಾ ಲಭ್ಯವಾದ ಮೇಲೆ ಅದರಲ್ಲಿನ  ವಿವರಗಳನ್ನು ಪರಿಶೀಲಿಸಬೇಕು. ಯಾವುದಾದರೂ ಬದಲಾವಣೆ ಇದ್ದರೆ ಆನ್‌ಲೈನ್‌ನಲ್ಲೇ ಆಕ್ಷೇಪಣೆ ಸಲ್ಲಿಸಬೇಕು. ಅಲ್ಲದೆ, ಕೆಲವು ದಾಖಲೆಗಳನ್ನು ಮಾಲೀಕರು ಸಲ್ಲಿಸಬೇಕಾಗುತ್ತದೆ. ಅದೆಲ್ಲವನ್ನೂ ಒಳಗೊಂಡ ಅಂತಿಮ ಇ–ಖಾತಾವನ್ನು ನ. 1ರಂದು ನಾಗರಿಕರಿಗೆ ಲಭ್ಯವಾಗುವಂತೆ ಮಾಡಲು ಪಾಲಿಕೆ ಉದ್ದೇಶಿಸಿದೆ.

‘ಇ–ಖಾತಾ ಒಂದು ಬಾರಿ ಲಭ್ಯವಾದ ಮೇಲೆ ಆಸ್ತಿ ಮಾಲೀಕರಿಗೆ ಅದು ‘ಭೂ–ಆಧಾರ್‌’ ಇದ್ದಂತೆ. ಆಸ್ತಿ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಚಿತ್ರ ಹಾಗೂ ಸ್ಥಳದ ಕುರಿತ ನಿರ್ದಿಷ್ಟ ಮಾಹಿತಿಯೊಂದಿಗೆ ದಾಖಲೆ ಲಭ್ಯವಾಗುತ್ತದೆ’ ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್‌ ಮೌದ್ಗಿಲ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಸ್ತಿಯೊಂದಿಗೆ ಅಧಿಕೃತವಾಗಿ ಇ–ಖಾತಾ ಲಭ್ಯವಾದ ಮೇಲೆ ಮುಂದಿನ ಎಲ್ಲ ಪ್ರಕ್ರಿಯೆಗಳೂ ಆನ್‌ಲೈನ್‌ನಲ್ಲೇ ನಡೆಯುತ್ತವೆ. ಎಲ್ಲ ಮಾಹಿತಿಗಳು ಉಪ ನೋಂದಣಾಧಿಕಾರಿ ಕಚೇರಿಗಳಿಗೂ ಲಭ್ಯವಾಗುವಂತೆ ಮಾಡಲಾಗುತ್ತದೆ. ನಂತರ ಆಸ್ತಿ ಮಾರಾಟದ ಪ್ರಕ್ರಿಯೆಯಾದ ಮೇಲೆ ಖಾತಾ ಬದಲಾವಣೆಗೆ ಯಾವುದೇ ಕಚೇರಿಗೆ ಹೋಗುವಂತಿಲ್ಲ. ಹೊಸ ಮಾಲೀಕರಿಗೆ ವರ್ಗವಾದ ಇ–ಖಾತಾ ಲಭ್ಯವಾಗುತ್ತದೆ’ ಎಂದರು.

ಮಾಲೀಕರು ಸಹಕರಿಸಿ: ಮೌದ್ಗಿಲ್‌
‘ನಗರದ ಆಸ್ತಿಗಳ ಅಕ್ಷಾಂಶ, ರೇಖಾಂಶ (ಲ್ಯಾಟಿಟ್ಯೂಡ್‌ ಮತ್ತು ಲಾಂಗಿಟ್ಯೂಡ್‌) ಸೆರೆಹಿಡಿಯಲು ಪ್ರತಿ ವಾರ್ಡ್‌ಗೆ 150 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಸಿಬ್ಬಂದಿ ಬಂದಾಗ ಆಸ್ತಿ ಮಾಲೀಕರು ಅವರೊಂದಿಗೆ ಸಹಕರಿಸಬೇಕು’ ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್‌ ಮೌದ್ಗಿಲ್‌ ಮನವಿ ಮಾಡಿದರು. ‘ಅಕ್ಷಾಂಶ, ರೇಖಾಂಶದ ಮಾಹಿತಿ ಸರಿಯಾಗಿ ದಾಖಲಾಗುವಂತೆ ಆಸ್ತಿಗಳ ಮಾಲೀಕರು ಎಚ್ಚರಿಕೆ ವಹಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.