ಬೆಂಗಳೂರು: ನಗರದಲ್ಲಿರುವ ಆಸ್ತಿಗಳ ಮಾಹಿತಿಯನ್ನು ಡಿಜಿಟಲೀಕರಣಗೊಳಿಸುವ ಹಾಗೂ ಸ್ವಯಂ ಘೋಷಿತ ತೆರಿಗೆ ಪದ್ಧತಿಯಡಿ ಪಾವತಿಸುತ್ತಿರುವ ಆಸ್ತಿ ತೆರಿಗೆಯನ್ನು ವಿಮರ್ಶಿಸುವ ಕಾರ್ಯವನ್ನು ಬಿಬಿಎಂಪಿ ಆರಂಭಿಸಿದೆ.
ಆಸ್ತಿಯ ಖಾತೆ, ಖಾತೆ ವರ್ಗಾವಣೆ ಸೇರಿದಂತೆ ಎಲ್ಲ ದಾಖಲೆಗಳನ್ನು ಆನ್‌ಲೈನ್‌ನಲ್ಲೇ ಒದಗಿಸುವ ಹಿನ್ನೆಲೆಯಲ್ಲಿ ಡಿಜಿಟಲೀಕರಣ ಆರಂಭಿಸಲಾಗಿದೆ. ಆಸ್ತಿ ಮಾಲೀಕರ ಮೊಬೈಲ್‌ಗೆ ಈ ಸಂದೇಶ ರವಾನೆಯಾಗುತ್ತಿದ್ದು, ಅದರಂತೆ ಮಾಹಿತಿ ಒದಗಿಸಲು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಲ್ಲಿ ಮಾಲೀಕರು ತೆರಿಗೆ ಪಾವತಿಸುತ್ತಿದ್ದಾರೆ. ಆದರೆ, ಇದರಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಆದ್ದರಿಂದ ಬಿಬಿಎಂಪಿಯ ಕಂದಾಯ ಅಧಿಕಾರಿಗಳು ಪ್ರತಿ ಕಟ್ಟಡವನ್ನು ಭೌತಿಕವಾಗಿ ಪರಿಶೀಲಿಸಿ, ಅದಕ್ಕೆ ಸರಿಯಾದ ತೆರಿಗೆಯನ್ನು ಪಾವತಿಸುವಂತೆ ‘ಡಿಮ್ಯಾಂಡ್ ನೋಟಿಸ್’ ನೀಡುವ ಕಾರ್ಯ ನ.1ರಿಂದ ಬಿಬಿಎಂಪಿ ಆರಂಭಿಸಿದೆ. ಇದರ ಜೊತೆಗೇ ಡಿಜಿಟಲೀಕರಣ ಪ್ರಕ್ರಿಯೆಯನ್ನೂ ನಡೆಸುವಂತೆ ಕಂದಾಯ ವಿಭಾಗದ ಅಧಿಕಾರಿಗಳಿಗೆ ಸೂಚಿಸಲಾಗಿದೆ.
40 ಆಸ್ತಿಗಳ ಗುರಿ: ‘ಆಸ್ತಿ ತೆರಿಗೆ ಪರಿಶೀಲನೆ ಹಾಗೂ ದಾಖಲೆಗಳ ಡಿಜಿಟಲೀಕರಣ ಪ್ರಕ್ರಿಯೆಯನ್ನು ಒಂದೇ ಬಾರಿಗೆ ನಡೆಸಲಾಗುತ್ತಿದ್ದು, ಕಂದಾಯ ನಿರೀಕ್ಷಕ ಹಾಗೂ ತೆರಿಗೆ ನಿರೀಕ್ಷಕರು ಪ್ರತಿ ದಿನ ತಲಾ 40 ಆಸ್ತಿಗಳ ಪ್ರಕ್ರಿಯೆಯನ್ನು ಮುಗಿಸಬೇಕೆಂಬ ಗುರಿ ನೀಡಲಾಗಿದೆ’ ಎಂದು ರಾಜರಾಜೇಶ್ವರಿನಗರ ವಲಯದ ಜಂಟಿ ಆಯುಕ್ತ ಅಜಯ್ ತಿಳಿಸಿದರು.
‘ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿ 2016ರಿಂದ ಎಷ್ಟು ಆಸ್ತಿ ತೆರಿಗೆ ಪಾವತಿಸಲಾಗುತ್ತಿದೆ. ವಾಸ್ತವದಲ್ಲಿರುವ ಕಟ್ಟಡದ ವಿಸ್ತೀರ್ಣವೆಷ್ಟು? ನಕ್ಷೆ ಉಲ್ಲಂಘನೆಯಾಗಿದೆಯೇ ಎಂಬ ಮಾಹಿತಿಯನ್ನು ಪರಿಶೀಲಿಸಲಾಗುತ್ತದೆ. 2016ರಿಂದ ಪಾವತಿಸಬೇಕಾದ ವ್ಯತ್ಯಾಸ ಮೊತ್ತ ಹಾಗೂ ಬಡ್ಡಿಯನ್ನು ಪಾವತಿಸುವಂತೆ ಆಸ್ತಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗುತ್ತದೆ’ ಎಂದರು.
‘ಈ ಹಿಂದೆಯೂ ಆಸ್ತಿ ತೆರಿಗೆ ಪಾವತಿಯ ಬಗ್ಗೆ ಯಾದೃಚ್ಛಿಕ(ರ‍್ಯಾಂಡಮ್)ವಾಗಿ ಆಸ್ತಿಗಳನ್ನು ಪರಿಶೀಲಿಸಿ, ವ್ಯತ್ಯಾಸವಿದ್ದರೆ ನೋಟಿಸ್ ನೀಡಲಾಗುತ್ತಿತ್ತು. ಈಗ ಎಲ್ಲ ಆಸ್ತಿಗಳನ್ನೂ ಪರಿಶೀಲಿಸಲಾಗುತ್ತಿದೆ. ಜತೆಗೆ, ಆಸ್ತಿಗಳ ಎಲ್ಲ ದಾಖಲೆಗಳು ಆನ್‌ಲೈನ್‌ನಲ್ಲೇ ಲಭ್ಯವಾಗುವಂತೆ ಡಿಜಿಟಲೀಕರಣ ಪ್ರಕ್ರಿಯೆಯನ್ನೂ ನಡೆಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.