ADVERTISEMENT

ರಂಗಭೂಮಿ ಚರಿತ್ರೆ ಡಿಜಿಟಲೀಕರಣಕ್ಕೆ ಮರುಜೀವ

ಅನುದಾನದ ಕೊರತೆ ಸೇರಿ ವಿವಿಧ ಕಾರಣಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆ

ವರುಣ ಹೆಗಡೆ
Published 5 ಜುಲೈ 2024, 23:03 IST
Last Updated 5 ಜುಲೈ 2024, 23:03 IST
ಕೆ.ವಿ. ನಾಗರಾಜಮೂರ್ತಿ
ಕೆ.ವಿ. ನಾಗರಾಜಮೂರ್ತಿ   

ಬೆಂಗಳೂರು: ಅನುದಾನದ ಕೊರತೆ ಸೇರಿ ವಿವಿಧ ಕಾರಣಗಳಿಂದ ನನೆಗುದಿಗೆ ಬಿದ್ದಿದ್ದ ಕರ್ನಾಟಕ ನಾಟಕ ಅಕಾಡೆಮಿಯ ರಂಗಭೂಮಿ ಚರಿತ್ರೆ ಡಿಜಿಟಲೀಕರಣ ಯೋಜನೆ ಐದು ವರ್ಷಗಳ ನಂತರ ಮರುಜೀವ ಪಡೆದಿದೆ. ಇದರಿಂದಾಗಿ ಡಿಜಿಟಲ್ ವೇದಿಕೆಯಲ್ಲಿ ರಂಗಭೂಮಿ ಚರಿತ್ರೆಯನ್ನು ಕಣ್ತುಂಬಿಕೊಳ್ಳುವ ಕಾಲ ಸನ್ನಿಹಿತವಾಗಿದೆ. 

ರಂಗಭೂಮಿ ಬೆಳೆದು ಬಂದ ಬಗೆ, ರಂಗ ತಂಡಗಳು, ರಂಗ ಸಾಹಿತ್ಯ, ಅಪರೂಪದ ಛಾಯಾಚಿತ್ರಗಳು ಸೇರಿದಂತೆ ರಂಗಭೂಮಿಗೆ ಸಂಬಂಧಿಸಿದ ವಿವಿಧ ವಿಷಯ ವಸ್ತುಗಳನ್ನು ಡಿಜಿಟಲೀಕರಣಗೊಳಿಸಲು ಅಕಾಡೆಮಿ 2018ರಲ್ಲಿ ಯೋಜನೆ ರೂಪಿಸಿತ್ತು. ಮೂರು ವರ್ಷಗಳಲ್ಲಿ ಡಿಜಿಟಲೀಕರಣ ಪೂರ್ಣಗೊಳಿಸಲು ಗಡುವು ಹಾಕಿಕೊಳ್ಳಲಾಗಿತ್ತು. ಅಕಾಡೆಮಿಯ ಅಂದಿನ ಅಧ್ಯಕ್ಷ ಜೆ. ಲೋಕೇಶ್ ಅವರು, ರಂಗಭೂಮಿಗೆ ಸಂಬಂಧಿಸಿದ ವಿಷಯ ವಸ್ತುಗಳನ್ನು ಡಿಜಿಟಲೀಕರಣಗೊಳಿಸುವ ಪ್ರಕ್ರಿಯೆ ಪ್ರಾರಂಭಿಸಿದ್ದರು.

ಬಳಿಕ ಬಂದ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು 2019ರಲ್ಲಿ ಅಕಾಡೆಮಿಗಳ ಅಧ್ಯಕ್ಷರ ನೇಮಕಾತಿಯನ್ನು ರದ್ದುಗೊಳಿಸಿ, ಹೊಸದಾಗಿ ನೇಮಕ ಮಾಡಿ ಆದೇಶ ಹೊರಡಿಸಿತ್ತು. ಅನುದಾನದ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ನಂತರ ಬಂದ ಕಾರ್ಯಕಾರಿ ಸಮಿತಿ ಡಿಜಿಟಲೀಕರಣಕ್ಕೆ ಆಸಕ್ತಿ ತಾಳದಿದ್ದರಿಂದ ಯೋಜನೆ ನನೆಗುದಿಗೆ ಬಿದ್ದಿತ್ತು. ಈಗ ಕೆ.ವಿ. ನಾಗರಾಜಮೂರ್ತಿ ಅವರ ಅಧ್ಯಕ್ಷತೆಯ ಹೊಸ ಕಾರ್ಯಕಾರಿ ಸಮಿತಿ ಈ ಯೋಜನೆಯನ್ನು ‍ಪೂರ್ಣಗೊಳಿಸಲು ಮುಂದಾಗಿದೆ.

ADVERTISEMENT

₹20 ಲಕ್ಷ ವೆಚ್ಚ: ಈ ಯೋಜನೆಗೆ ಒಟ್ಟು ₹20 ಲಕ್ಷ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು. ₹10 ಲಕ್ಷ ಮೊತ್ತದಲ್ಲಿ ಡಿಜಿಟಲೀಕರಣಗೊಳಿಸಲು ಬೇಕಾದ ಸಲಕರಣೆಗಳನ್ನು ಖರೀದಿಸಲಾಗಿತ್ತು. ಸಮಗ್ರ ನಾಟಕ ಚರಿತ್ರೆ ಸಂಗ್ರಹಿಸಲು ಆಗ ನಿಘಂಟು ತಜ್ಞ ಪ್ರೊ.ಜಿ. ವೆಂಕಟಸುಬ್ಬಯ್ಯ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನೂ ರಚಿಸಲಾಗಿತ್ತು. ವಿವಿಧ ನಾಟಕ ಕಂಪನಿಗಳು, ರಂಗಭೂಮಿ ತಜ್ಞರು ಹಾಗೂ ಪುಸ್ತಕ ಪ್ರಕಾಶನ ಸಂಸ್ಥೆಗಳಿಂದ ರಂಗಭೂಮಿಗೆ ಸಂಬಂಧಿಸಿದ ವಿಷಯ ವಸ್ತುಗಳನ್ನು ಕೇಂದ್ರ ಕಚೇರಿಗೆ ತರಿಸಿಕೊಂಡು, ಡಿಜಿಟಲೀಕರಣ ಪ್ರಕ್ರಿಯೆ ನಡೆಸಲಾಗಿತ್ತು. ಯೋಜನೆ ಪೂರ್ಣಗೊಳ್ಳುವ ಮೊದಲೇ ಕಾರ್ಯಕಾರಿ ಸಮಿತಿ ವಿಸರ್ಜನೆಗೊಂಡಿದ್ದರಿಂದ ಸಂಗ್ರಹಿಸಿದ್ದ ವಿಷಯ ವಸ್ತುಗಳು ಹಾಗೇ ಉಳಿದಿವೆ.

ಡಿಜಿಟಲೀಕರಣಗೊಳಿಸಲಾದವಿಷಯ ವಸ್ತುಗಳನ್ನು ಪರಿಷ್ಕರಿಸಿ, ವೆಬ್‌ಸೈಟ್‌ಗೆ ಅಳವಡಿಸುವ ಪ್ರಕ್ರಿಯೆ ಈವರೆಗೂ ನಡೆದಿಲ್ಲ. ವೃತ್ತಿ ಹಾಗೂ ಪೌರಾಣಿಕ ರಂಗಭೂಮಿಗೆ ಸಂಬಂಧಿಸಿದ ಸಾವಿರ ನಾಟಕ ಪುಸ್ತಕಗಳು ಡಿಜಿಟಲೀಕರಣಗೊಂಡಿವೆ. ಹವ್ಯಾಸಿ ರಂಗಭೂಮಿಯ ಕೆಲ ಪುಸ್ತಕಗಳನ್ನು ಡಿಜಿಟಲೀಕರಣಗೊಳಿಸುವ ಕೆಲಸ ಬಾಕಿಯಿದೆ ಎಂದು ಅಕಾಡೆಮಿ ಮೂಲಗಳು ತಿಳಿಸಿವೆ.

ರಂಗಭೂಮಿ ಚರಿತ್ರೆ ಡಿಜಿಟಲೀಕರಣವನ್ನು ಕೈಗೆತ್ತಿಕೊಂಡಿದ್ದೇವೆ. ಅಗತ್ಯ ಅನುದಾನವನ್ನು ಕ್ರಿಯಾಯೋಜನೆಯಲ್ಲಿ ಮೀಸಲಿಡಲಾಗಿದೆ.
–ಕೆ.ವಿ. ನಾಗರಾಜಮೂರ್ತಿ, ನಾಟಕ ಅಕಾಡೆಮಿ ಅಧ್ಯಕ್ಷ

ವೆಬ್‌ಸೈಟ್‌ಗೆ ಅಳವಡಿಕೆ

ಡಿಜಿಟಲೀಕರಣ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅವನ್ನು ಅಕಾಡೆಮಿಯ ವೆಬ್‌ಸೈಟ್‌ನಲ್ಲಿ ಅಳವಡಿಸುವುದೂ ಯೋಜನೆಯ ಭಾಗವಾಗಿತ್ತು. ರಂಗಭೂಮಿಗೆ ಸಂಬಂಧಿಸಿದ 150 ಸಾಕ್ಷ್ಯಚಿತ್ರಗಳನ್ನು ಸಿದ್ಧಪಡಿಸಲಾಗಿತ್ತು.

2020ರಲ್ಲಿ ಕೋವಿಡ್ ಕಾಣಿಸಿಕೊಂಡ ಬಳಿಕ ಅಕಾಡೆಮಿಗಳಿಗೆ ನೀಡಲಾಗುತ್ತಿದ್ದ ವಾರ್ಷಿಕ ಅನುದಾನವನ್ನು ಕಡಿತ ಮಾಡಲಾಗಿತ್ತು. ಇದರಿಂದಾಗಿ ವಾರ್ಷಿಕ ಅನುದಾನವನ್ನು ಈ ಯೋಜನೆಗೆ ಬಳಸಲು ನಂತರದ ಕಾರ್ಯಕಾರಿ ಸಮಿತಿ ಆಸಕ್ತಿ ತೋರಿಸಿರಲಿಲ್ಲ. 

‘ಯೋಜನೆ ಪೂರ್ಣಗೊಳಿಸಲು ₹10 ಲಕ್ಷದಿಂದ 15 ಲಕ್ಷ ಬೇಕಾಗುತ್ತದೆ. ಅನುದಾನ ಲಭ್ಯವಿರುವುದರಿಂದ ಆದಷ್ಟು ಬೇಗ ಡಿಜಿಟಲೀಕರಣ ಪೂರ್ಣಗೊಳಿಸಿ, ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾಗುತ್ತದೆ’ ಎಂದು ಕೆ.ವಿ. ನಾಗರಾಜಮೂರ್ತಿ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.