ADVERTISEMENT

ಕೃಷಿ ವಿಶ್ವವಿದ್ಯಾಲಯಗಳಲ್ಲಿ ಡಿಪ್ಲೊಮಾ ಕೋರ್ಸ್‌ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 4 ಜುಲೈ 2023, 3:27 IST
Last Updated 4 ಜುಲೈ 2023, 3:27 IST
ಬೆಂಗಳೂರು ವಿಶ್ವವಿದ್ಯಾಲಯ
ಬೆಂಗಳೂರು ವಿಶ್ವವಿದ್ಯಾಲಯ   

ಆದಿತ್ಯ ಕೆ.ಎ.

ಬೆಂಗಳೂರು: ಕಡಿಮೆ ಖರ್ಚಿನಲ್ಲಿ ಕೃಷಿ, ಅರಣ್ಯ ಹಾಗೂ ರೇಷ್ಮೆ ಡಿಪ್ಲೊಮಾ ಪೂರ್ಣಗೊಳಿಸಿ ಸ್ವಯಂ ಉದ್ಯೋಗ ಅಥವಾ ಖಾಸಗಿ ಕ್ಷೇತ್ರದಲ್ಲಿ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿದ್ದ ‘ಡಿಪ್ಲೊಮಾ ಕೋರ್ಸ್‌’ಗಳನ್ನು ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳು ಸ್ಥಗಿತಗೊಳಿಸಲು ಮುಂದಾಗಿವೆ.

ಈ ಹಿಂದೆ ಕೋರ್ಸ್‌ ಆರಂಭಕ್ಕೆ ಹೊರಡಿಸಿದ್ದ ಅಧಿಸೂಚನೆಯನ್ನು ಸರ್ಕಾರದ ಸೂಚನೆಯಂತೆ ವಿಶ್ವವಿದ್ಯಾಲಯಗಳು ವಾಪಸ್ ಪಡೆದುಕೊಳ್ಳುತ್ತಿವೆ. ಇದರಿಂದ ಕೃಷಿ ಕ್ಷೇತ್ರದ ಆಸಕ್ತ ಅಭ್ಯರ್ಥಿಗಳು ನಿರಾಸೆಗೆ ಒಳಗಾಗಿದ್ದಾರೆ. ಇದೇ ಶೈಕ್ಷಣಿಕ ಸಾಲಿನಿಂದಲೇ ಎರಡು ವರ್ಷದ ಡಿಪ್ಲೊಮಾ ಕಲಿಯಲು ಅವಕಾಶ ಸಿಗುವುದಿಲ್ಲ.

ADVERTISEMENT
ಉನ್ನತ ಮಟ್ಟದ ಸಮಿತಿ ನಿರ್ದೇಶನದಂತೆ ಈ ಅಧಿಸೂಚನೆ ವಾಪಸ್‌ ಪಡೆಯಲಾಗಿದೆ. ದ್ವಿತೀಯ ವರ್ಷದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಕೋರ್ಸ್ ಪೂರ್ಣಗೊಳಿಸುತ್ತಾರೆ. ಹೊಸದಾಗಿ ಪ್ರವೇಶ ಇಲ್ಲ.
ಬಸವೇಗೌಡ, ಕುಲಸಚಿವ ಬೆಂಗಳೂರು ಕೃಷಿ ವಿ.ವಿ

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಹಾಗೂ ಅರಣ್ಯ ಡಿಪ್ಲೊಮಾ ಕೋರ್ಸ್‌ಗಳಿದ್ದವು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಯ ಮಂಡ್ಯದ ಕೃಷಿ ಕಾಲೇಜಿನಲ್ಲಿ ಕೃಷಿ, ಚಿಂತಾಮಣಿ ಕೃಷಿ ಕಾಲೇಜಿನಲ್ಲಿ ರೇಷ್ಮೆಗೆ ಸಂಬಂಧಿಸಿದ ಕೋರ್ಸ್‌ಗಳಿದ್ದವು. ಧಾರವಾಡ ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾಲಯಗಳು ಅಧಿಸೂಚನೆ ಹಿಂಪಡೆದಿರುವ ಬಗ್ಗೆ ಅಧಿಕೃತವಾಗಿ ತಿಳಿಸಿವೆ. ಆದರೆ, ಆದೇಶದಲ್ಲಿ ಸ್ಪಷ್ಟವಾದ ಕಾರಣ ನಮೂದಿಸಿಲ್ಲ.

ರಾಯಚೂರು, ಶಿವಮೊಗ್ಗ, ಬೀದರ್‌ ಸೇರಿದಂತೆ ಉಳಿದ ವಿಶ್ವವಿದ್ಯಾಲಯಗಳಲ್ಲೂ ಅಧಿಕೃತ ಆದೇಶ ಹೊರಡಿಸುವುದು ಬಾಕಿಯಿದೆ. ಸರ್ಕಾರದ ಸೂಚನೆಯಿರುವ ಕಾರಣಕ್ಕೆ ಅಲ್ಲಿಯೂ ಈ ಕೋರ್ಸ್‌ ಕಲಿಕೆಗೆ ಅವಕಾಶ ಸಿಗುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಬೀದರ್‌ ವಿಶ್ವವಿದ್ಯಾಲಯದಲ್ಲಿ ಹೈನುಗಾರಿಕೆ ಹಾಗೂ ಬಾಗಲಕೋಟೆಯಲ್ಲಿ ತೋಟಗಾರಿಕೆ ವಿಷಯದ ಡಿಪ್ಲೊಮಾ ಕೋರ್ಸ್‌ಗಳಿದ್ದವು.

‘ಕೃಷಿ ಸಹಾಯಕರ ನೇಮಕದ ಉದ್ದೇಶದಿಂದ ವಿವಿಧ ವಿಷಯಗಳ ಡಿಪ್ಲೊಮಾ ಕೋರ್ಸ್‌ಗಳನ್ನು 10 ವರ್ಷಗಳ ಹಿಂದೆ ಆರಂಭಿಸಲಾಗಿತ್ತು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಸ್ಸೆಸ್ಸೆಲ್ಸಿ ಪಡೆದ ತಲಾ 50 ವಿದ್ಯಾರ್ಥಿಗಳಿಗೆ ಪ್ರತಿವರ್ಷ ಪ್ರವೇಶ ನೀಡಲಾಗುತ್ತಿತ್ತು. ಡಿಪ್ಲೊಮಾ ಕಲಿತವರಿಗೆ ಬಿಎಸ್ಸಿ (ಕೃಷಿ) ಪದವಿಗೆ ಸೇರಲು ಮೀಸಲಾತಿ ಇತ್ತು. ಆದರೆ, ಈ ವಿದ್ಯಾರ್ಹತೆಗೆ ಸರ್ಕಾರಿ ನೌಕರಿ ಲಭಿಸುತ್ತಿರಲಿಲ್ಲ. ಕೋರ್ಸ್‌ ಮುಗಿಸಿದವರು ಕೃಷಿ ಪರಿಕರ ಮಾರಾಟ ಮಳಿಗೆ, ಬಿತ್ತನೆ ಬೀಜ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಖಾಸಗಿ ಕ್ಷೇತ್ರದಲ್ಲಿ ಉದ್ಯೋಗದ ಅವಕಾಶಗಳು ಹೆಚ್ಚಿದ್ದವು’ ಎಂದು ಪ್ರಾಧ್ಯಾಪಕರೊಬ್ಬರು ತಿಳಿಸಿದರು.

‘ಹೊಸ ಶಿಕ್ಷಣ ನೀತಿ ಜಾರಿಯಾದರೆ ಬೇರೆ ಕೋರ್ಸ್‌ಗಳಲ್ಲಿಯೂ ಇದೇ ಡಿಪ್ಲೊಮಾ ವಿಷಯವನ್ನೂ ಕಲಿಯಬಹುದಾಗಿದೆ. ಆ ಕಾರಣಕ್ಕೆ ಈ ಕೋರ್ಸ್‌ಗಳನ್ನು ಸ್ಥಗಿತಗೊಳಿಸುವಂತೆ ಸೂಚಿಸಿರಬಹುದು’ ಎಂದು ಪ್ರಾಧ್ಯಾಪಕರೊಬ್ಬರು ತಿಳಿಸಿದರು.

ಅನುದಾನದ ಕೊರತೆ:

‘ಈ ಕೋರ್ಸ್‌ಗಳಿಗೆ ಸರ್ಕಾರವು ಆರ್ಥಿಕ ನೆರವು ನೀಡುತ್ತಿರಲಿಲ್ಲ. ಕೋರ್ಸ್‌ ಆರಂಭಿಸುವಾಗ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡುವುದಾಗಿ ಭರವಸೆ ನೀಡಿತ್ತು. ಕ್ರಮೇಣ ಅದನ್ನು ನೀಡಲಿಲ್ಲ. ವರ್ಷದಿಂದ ವರ್ಷಕ್ಕೆ ಕೃಷಿ ವಿ.ವಿಗಳಿಗೆ ಆರ್ಥಿಕ ಹೊರೆ ಹೆಚ್ಚುತ್ತಲೇ ಹೋಯಿತು. ಪ್ರತ್ಯೇಕ ಕೊಠಡಿ, ಪ್ರಯೋಗಾಲಯದ ಸೌಕರ್ಯವನ್ನು ಸರ್ಕಾರವು ಕಲ್ಪಿಸಲಿಲ್ಲ. ಬೋಧನಾ ಸಿಬ್ಬಂದಿಯನ್ನೂ ನೇಮಿಸಲಿಲ್ಲ. ಬಹುತೇಕ ಕಡೆ ಪದವೀಧರರಿಗೆ ಬೋಧಿಸುತ್ತಿದ್ದ ಪ್ರಾಧ್ಯಾಪಕರೇ ಡಿಪ್ಲೊಮಾ ವಿದ್ಯಾರ್ಥಿಗಳಿಗೂ ಕಲಿಸುತ್ತಿದ್ದರು’ ಎಂದು ಕೃಷಿ ವಿಶ್ವವಿದ್ಯಾಲಯವೊಂದರ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಬಸವೇಗೌಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.