ADVERTISEMENT

ಸ್ತಬ್ಧ ಚಿತ್ರಗಳಿಗೆ ಪ್ರಶಸ್ತಿ ವಿತರಣೆಯಲ್ಲಿ ತಾರತಮ್ಯ: ಆರೋಪ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 15:57 IST
Last Updated 18 ಅಕ್ಟೋಬರ್ 2024, 15:57 IST
<div class="paragraphs"><p>ಮೈಸೂರು ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತ ಅಭಿಮನ್ಯು ಆನೆ ಗಜಗಾಂಭೀರ್ಯದಿಂದ ಹೆಜ್ಜೆ ಹಾಕಿದ ದೃಶ್ಯ </p></div>

ಮೈಸೂರು ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯನ್ನು ಹೊತ್ತ ಅಭಿಮನ್ಯು ಆನೆ ಗಜಗಾಂಭೀರ್ಯದಿಂದ ಹೆಜ್ಜೆ ಹಾಕಿದ ದೃಶ್ಯ

   

-ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.

ಪ್ರಜಾವಾಣಿ ವಾರ್ತೆ

ADVERTISEMENT

ಬೆಂಗಳೂರು: ಮೈಸೂರು ದಸರಾದಲ್ಲಿ ಸ್ತಬ್ಧ ಚಿತ್ರಗಳಿಗೆ ಪ್ರಶಸ್ತಿ ವಿತರಣೆಯಲ್ಲಿ ತಾರತಮ್ಯ ಎಸಗಲಾಗಿದೆ. 10 ವರ್ಷಗಳಲ್ಲಿ ಮೈಸೂರು ವಿಭಾಗದ ನಾಲ್ಕು ಜಿಲ್ಲೆಗಳಿಗೆ ಮಾತ್ರ ಪ್ರಶಸ್ತಿ ನೀಡಲಾಗುತ್ತಿದ್ದು, ಉತ್ತರ ಕರ್ನಾಟಕದ ಜಿಲ್ಲೆಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಪ್ರಗತಿಪರ ಕನ್ನಡ ಸಂಘಟನೆಗಳ ಒಕ್ಕೂಟ, ಕರ್ನಾಟಕ ನಾಗರಿಕ ಹಕ್ಕುಗಳ ಜಾಗೃತಿ ಸಮಿತಿ ಆರೋಪಿಸಿದೆ.

‘ಸ್ತಬ್ಧ ಚಿತ್ರಗಳಲ್ಲಿ ಪ್ಲಾಸ್ಟಿಕ್‌ ಬಳಸಬಾರದು. ನಮ್ಮ ಇತಿಹಾಸ, ಪರಂಪರೆಯನ್ನು ಅನಾವರಣಗೊಳಿಸಬೇಕು ಎಂಬುದು ಸೇರಿದಂತೆ ಹಲವು ನಿಯಮಗಳಿವೆ. ಆದರೆ, ನಿಯಮಗಳನ್ನು ಪಾಲಿಸದವರಿಗೆ ಪ್ರಶಸ್ತಿ ನೀಡಿದ್ದಾರೆ. ರನ್ನನ ಗದಾಯುದ್ಧ ಮತ್ತು ಶ್ರೀಕೃಷ್ಣ ಪಾರಿಜಾತ ಸಹಿತ ಪರಂಪರೆಯನ್ನು ಬಿಂಬಿಸುವ, ನಿಯಮ ಬದ್ಧವಾಗಿ ಮಾಡಿರುವ ಬಾಗಲಕೋಟೆ ಜಿಲ್ಲೆಯ ಸ್ತಬ್ಧಚಿತ್ರ ಪ್ರಶಸ್ತಿಗೆ ಅರ್ಹವಾಗಿದ್ದರೂ ಪರಿಗಣಿಸಿಲ್ಲ’ ಎಂದು ಒಕ್ಕೂಟದ ಅಧ್ಯಕ್ಷ ಕೇಶವಮೂರ್ತಿ, ಜಾಗೃತಿ ಸಮಿತಿ ಅಧ್ಯಕ್ಷ ಮೂರ್ತಿ ಎನ್‌. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಅಖಂಡ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಅದ್ಭುತ ಸ್ತಬ್ಧ ಚಿತ್ರಗಳು ಬರುತ್ತಿದ್ದರೂ ಮಂಡ್ಯ, ಚಾಮರಾಜನಗರ, ಮೈಸೂರು, ಮಡಿಕೇರಿ ಜಿಲ್ಲೆಗಳಿಗೆ ಮಾತ್ರ ಪ್ರಶಸ್ತಿ ನೀಡಲಾಗುತ್ತಿದೆ. ಉತ್ತರ ಕರ್ನಾಟಕದ ಜಿಲ್ಲೆಗಳು ರಾಜ್ಯದಲ್ಲಿ ಇಲ್ಲವೇ ಎಂದು ಪ್ರಶ್ನಿಸಿದರು.

ಈ ಬಾರಿ ಪ್ರಶಸ್ತಿಯನ್ನು ರದ್ದುಪಡಿಸಬೇಕು. ಸಂವಿಧಾನ ಜಾಗೃತಿ ಜಾಥಾದಲ್ಲಿ ವಿಭಾಗವಾರು ಪ್ರಶಸ್ತಿಗಳನ್ನು ನೀಡಿದಂತೆ ದಸರಾ ಸ್ತಬ್ಧಚಿತ್ರಗಳಿಗೂ ವಿಭಾಗವಾರು ಪ್ರಶಸ್ತಿ ನೀಡಬೇಕು. ಇಲ್ಲದೇ ಇದ್ದರೆ ಮೈಸೂರು ದಸರಾದಂತೆ ಉತ್ತರ ಕರ್ನಾಟಕದಲ್ಲಿಯೂ ಪ್ರತ್ಯೇಕ ಹಬ್ಬ ಮಾಡಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.