ಬೆಂಗಳೂರು: ‘ಸದ್ಯ ಯಾವುದೇ ಸಾಮಾಜಿಕ ಚಟುವಟಿಕೆ ಅಥವಾ ಅಭಿಯಾನದಲ್ಲಿ ನಾನು ತೊಡಗಿಸಿಕೊಂಡಿಲ್ಲ. ಉನ್ನತ ಶಿಕ್ಷಣ ಪಡೆಯುವತ್ತ ಹೆಚ್ಚು ಗಮನ ಕೇಂದ್ರೀಕರಿಸಿದ್ದೇನೆ’ ಎಂದು ರೈತರ ಪ್ರತಿಭಟನೆಗೆ ‘ಟೂಲ್ ಕಿಟ್’ ರೂಪಿಸಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ, ಸದ್ಯ ಜಾಮೀನಿನ ಮೇಲಿರುವ ದಿಶಾ ರವಿ ಹೇಳಿದರು.
ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು, ‘ಪ್ರಜಾವಾಣಿ’ ಜೊತೆ ಮಾತನಾಡಿದರು.
ಮೌಂಟ್ ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ದಿಶಾ, ಫ್ರೈಡೇ ಫಾರ್ ಫ್ಯೂಚರ್ ಸಂಸ್ಥೆ ಮೂಲಕ ಹವಾಮಾನ ಬದಲಾವಣೆ ಜಾಗೃತಿ ಅಭಿಯಾನ ನಡೆಸುತ್ತಿದ್ದರು. ‘ಹವಾಮಾನ ಬದಲಾವಣೆ ಕುರಿತು ಜಾಗೃತಿ ಮಾತ್ರವಲ್ಲ, ಆದಿವಾಸಿಗಳ ಹಕ್ಕುಗಳ ಜಾಗೃತಿಗಾಗಿಯೂ ನಾನು ಕೆಲಸ ಮಾಡಿದ್ದೇನೆ. ಹಲವು ದಲಿತ ಸಂಘಟನೆಗಳ ಜೊತೆಗೂಡಿ ಜಾತಿ ಮತ್ತು ನೈಸರ್ಗಿಕ ನ್ಯಾಯದ ಬಗ್ಗೆಯೂ ಕೆಲಸ ಮಾಡಿದ್ದೇನೆ’ ಎಂದು ಹೇಳಿದರು.
‘ಪ್ರಕರಣದ ನಂತರ ಮತ್ತೆ ಕುಟುಂಬದೊಂದಿಗೆ ಸಮಯದ ಕಳೆಯುತ್ತಿರುವುದು ಸಂತಸ ತಂದಿದೆ. ಬೆಂಗಳೂರಿನಲ್ಲಿ ಇರುವುದು ಹೆಚ್ಚು ಖುಷಿ ಮತ್ತು ನೆಮ್ಮದಿ ನೀಡುತ್ತದೆ’ ಎಂದೂ ಹೇಳಿದರು.
ತಮ್ಮ ಬಂಧನ ಹಾಗೂ ದೆಹಲಿ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಯ ಕುರಿತು ಯಾವುದೇ ಪ್ರತಿಕ್ರಿಯೆಯನ್ನು ಅವರು ನೀಡಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.