ADVERTISEMENT

ಖಾಸಗಿ ಆಸ್ಪತ್ರೆ: ಕೆಪಿಎಂಇ ಸಂಖ್ಯೆ ಪ್ರದರ್ಶನ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 8 ಜೂನ್ 2024, 23:39 IST
Last Updated 8 ಜೂನ್ 2024, 23:39 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‌ಗಳು ತಮ್ಮ ಕೆಪಿಎಂಇ ನೋಂದಣಿ ಸಂಖ್ಯೆ, ಆಸ್ಪತ್ರೆ ಮತ್ತು ಮಾಲೀಕರ ಹೆಸರನ್ನು ಕಟ್ಟಡದ ಮುಂಭಾಗ ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. 

ನಕಲಿ ವೈದ್ಯರ ಹಾವಳಿ ತಡೆಯಲು ಇಲಾಖೆ ಈ ಕ್ರಮ ಕೈಗೊಂಡಿದೆ.ಕೆಪಿಎಂಇ ಕಾಯ್ದೆ ನಿಯಮ 5ರ ಪ್ರಕಾರ, ಸಾರ್ವಜನಿಕರ ಮಾಹಿತಿಗಾಗಿ ವೈದ್ಯಕೀಯ ಪದ್ಧತಿ ಮತ್ತು ಲಭ್ಯವಿರುವ ಸೇವೆಗಳ ವಿವರವನ್ನು ಆಸ್ಪತ್ರೆಯ ಆವರಣದ ಪ್ರಮುಖ ಸ್ಥಳಗಳಲ್ಲಿ ಸ್ಪಷ್ಟವಾಗಿ ಪ್ರದರ್ಶಿಸಬೇಕು ಎಂದು ಸೂಚಿಸಲಾಗಿದೆ. 

ADVERTISEMENT

ಕೆಲ ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳು ಸಾಂಪ್ರದಾಯಿಕ ಹಾಗೂ ಪಾರಂಪರಿಕ ಪದ್ಧತಿ, ಮನೆ ಮದ್ದುಗಳು, ಬಾಡಿ ಮಸಾಜ್ ಹಾಗೂ ವಿವಿಧ ಥೆರಪಿಗಳ ‌ ಅನಧಿಕೃತ ಅಭ್ಯಾಸದಲ್ಲಿ ತೊಡಗಿಕೊಂಡಿರುವುದು ಗಮನಕ್ಕೆ ಬಂದಿದೆ. ಇವುಗಳು ಕೆಪಿಎಂಇ ಕಾಯ್ದೆ ಅಡಿಯಲ್ಲಿ ವೈದ್ಯಕೀಯ ಚಿಕಿತ್ಸೆಗಳಾಗಿ ವರ್ಗೀಕರಿಸಲ್ಪಟ್ಟಿಲ್ಲ. ಆದ್ದರಿಂದ ಎಲ್ಲ ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳು ಹೊರಭಾಗದಲ್ಲಿ ಮಾಹಿತಿ ಫಲಕವನ್ನು ಹಾಕಬೇಕು. ಅಲೋಪತಿ ಆಸ್ಪತ್ರೆಗಳು ನೀಲಿ ಬಣ್ಣ ಮತ್ತು ಆಯುರ್ವೇದ ಆಸ್ಪತ್ರೆಗಳು ಹಸಿರು ಬಣ್ಣ ಸೂಚಿತ ಫಲಕವನ್ನು ಬಳಸಬೇಕು. ಈ ಮೂಲಕ ಬಣ್ಣ ಸಂಹಿತೆಯನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದು ತಿಳಿಸಲಾಗಿದೆ.

ಈ ನಿಯಮಗಳನ್ನು ಅನುಸರಿಸಲು ವಿಫಲವಾದಲ್ಲಿ, ಅಂತಹವರ ವಿರುದ್ಧ ಕೆಪಿಎಂಇ ಕಾಯ್ದೆಯಡಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಲಾಗಿದೆ.

‘ನಕಲಿ ಮತ್ತು ಅರ್ಹತೆ ಹೊಂದಿಲ್ಲದ ವೈದ್ಯರು ಸಮಾಜಕ್ಕೆ ಕಂಟಕರಾಗಿದ್ದು, ರೋಗಿಗಳ ಆರೋಗ್ಯದ ವಿಚಾರದಲ್ಲಿ ಚೆಲ್ಲಾಟವಾಡುತ್ತಿದ್ದಾರೆ. ನಮ್ಮ ಸರ್ಕಾರವು ರೋಗಿಗಳ ಸುರಕ್ಷತೆಗೆ ಮತ್ತು ಉತ್ತಮ ಆರೋಗ್ಯ ಸೇವೆ ಒದಗಿಸಲು ಬದ್ಧವಾಗಿದೆ. ನಕಲಿ ವೈದ್ಯರಿಗೆ ಕಡಿವಾಣ ಹಾಕಲು ಕಠಿಣ ನಿಯಮ ಜಾರಿಗೊಳಿಸಲಾಗಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.