ಬೆಂಗಳೂರು: ‘ವ್ಯಾಜ್ಯ ಪ್ರಕರಣಗಳು ಸಮಾಜಕ್ಕೆ ಕ್ಯಾನ್ಸರ್ ಇದ್ದಂತೆ. ಹೀಗಾಗಿ, ವ್ಯಾಜ್ಯ ಮುಕ್ತಗೊಳಿಸಲು ನ್ಯಾಯಾಂಗ ವ್ಯವಸ್ಥೆಯನ್ನು ಬೆಂಬಲಿಸಬೇಕಿದೆ’ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಬ್ದುಲ್ ನಜೀರ್ ಅಭಿಪ್ರಾಯಪಟ್ಟರು.
ವಕೀಲರ ಸಂಘ, ಲೋಕೋಪಯೋಗಿ ಇಲಾಖೆ ಮತ್ತು ಕಟ್ಟಡ ಸಮಿತಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ‘ವಕೀಲರ ಭವನದ 5, 6 ಮತ್ತು 7ನೇ ಮಹಡಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ದೇಶದಲ್ಲಿ 3 ಕೋಟಿಗೂ ಹೆಚ್ಚು ವ್ಯಾಜ್ಯಗಳು ಇತ್ಯರ್ಥಕ್ಕೆ ಬಾಕಿ ಇವೆ. ಹೀಗಿರುವಾಗ ಸಮಾಜ ಮತ್ತು ದೇಶದಲ್ಲಿ ಶಾಂತಿ ಕಾಪಾಡಲು ಹೇಗೆ ಸಾಧ್ಯ’ ಎಂದರು.
‘ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಬಸವಣ್ಣನವರ 7 ಬೇಡಗಳನ್ನು ಅಳವಡಿಸಿಕೊಳ್ಳಬೇಕಿದೆ. ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ. ಇದೇ ಅಂತರಂಗ ಶುದ್ಧಿ. ಇದೇ ಬಹಿರಂಗ ಶುದ್ಧಿ. ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ’ ಇದನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಶಾಂತಿ ನೆಲೆಸಲಿದೆ’ ಎಂದರು.
‘ದೆಹಲಿ ಸೇರಿ ದೇಶದ ಇತರೆಡೆ ವಕೀಲರ ಭವನದ ಜತೆಗೆ ‘ಲಾ ಚೇಂಬರ್ಸ್’ ಇದೆ. ಬೆಂಗಳೂರಿನಲ್ಲಿಯೂ ವಕೀಲರ ಭವನದ ಆಸುಪಾಸಿನಲ್ಲಿಯೇ ‘ಲಾ ಚೇಂಬರ್ಸ್’ ನಿರ್ಮಾಣ ಮಾಡಿದರೆ ವಕೀಲರಿಗೆ ಅನುಕೂಲ ಆಗಲಿದೆ’ ಎಂದು ಅವರು ಸಲಹೆ ನೀಡಿದರು.
‘ವ್ಯಾಜ್ಯಗಳ ಶೀಘ್ರ ಪರಿಹಾರಕ್ಕಾಗಿ ಮಧ್ಯಸ್ಥಿಕೆ ಕೇಂದ್ರ ಸ್ಥಾಪನೆ ಸೇರಿದಂತೆ ಪೂರಕ ವ್ಯವಸ್ಥೆಗಳನ್ನು ಒದಗಿಸಲು ಸರ್ಕಾರ ಸಿದ್ಧವಿದೆ. ನ್ಯಾಯಾಧೀಶರ ಹುದ್ದೆಗಳನ್ನು ಶೀಘ್ರದಲ್ಲಿ ತುಂಬಲು ಕ್ರಮ ಕೈಗೊಳ್ಳಲಾಗುವುದು. ಬೆಂಗಳೂರಿಗೆ ಲಾಯರ್ಸ್ ಚೇಂಬರ್ಸ್ ಮಾಡಲು ಮುಂದಿನ ಬಜೆಟ್‌ನಲ್ಲಿ ಅನುದಾನ ಒದಗಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅರವಿಂದಕುಮಾರ್ ಮಾತನಾಡಿ, ‘ವ್ಯಾಜ್ಯ ಪ್ರಕರಣಗಳನ್ನು ಮುಂದೂಡುವಂತೆ ಕೇಳುವ ಬದಲು ಪ್ರಕರಣಗಳನ್ನು ಇತ್ಯರ್ಥಪಡಿಸುವತ್ತ ವಕೀಲರು ಚಿಂತನೆ ನಡೆಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.