ಬೆಂಗಳೂರು: ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡುವಾಗ ಸಂಗೀತ ಸಾಧಕರು, ಅಂಗವಿಕಲ ಸಾಧಕರನ್ನು ಕಡೆಗಣಿಸಲಾಗಿದೆ ಎಂದು ಸಂಗೀತ ಕಲಾವಿದರ ವೇದಿಕೆ ಮತ್ತು ಅಂಗವಿಕಲರ ಸಮಿತಿ ಸಹಿತ ವಿವಿಧ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ.
ಸುಗಮ ಸಂಗೀತ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಶಾಸ್ತ್ರೀಯ ಸಂಗೀತ, ಗಮಕ ಮುಂತಾದ ಕ್ಷೇತ್ರಗಳನ್ನು ಗುರುತಿಸದೇ ಇರುವುದು ಆಘಾತಕಾರಿ. ಈ ಕ್ಷೇತ್ರಗಳ ಸಾಧಕರು ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರಾಗಿದ್ದಾರೆ. ಕನ್ನಡ ನಾಡಿನ ಘನತೆಯನ್ನು ಎತ್ತಿ ಹಿಡಿದಿದ್ದಾರೆ. ಇಂಥ ಸಾಧಕರನ್ನು ಕಡೆಗಣಿಸಿರುವುದು ಖಂಡನೀಯ ಎಂದು ಸುಗಮ ಸಂಗೀತ ಪರಿಷತ್ತು ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ ತಿಳಿಸಿದ್ದಾರೆ.
21 ಬಗೆಯ ಅಂಗವೈಕಲ್ಯಗಳಿವೆ. ಅದರಲ್ಲಿ ಒಂದೆರಡು ಅಂಗವೈಕಲ್ಯಗಳನ್ನು ಹೊರತುಪಡಿಸಿ ಉಳಿದ ಅಂಗವಿಕಲತೆ ಹೊಂದಿರುವವರು ವಯಸ್ಸಾದಂತೆ ದೈಹಿಕ ಸಾಮರ್ಥ್ಯವನ್ನು ಕಳೆದುಕೊಂಡು ನಿಸ್ತೇಜರಾಗುತ್ತಾರೆ. ಹಾಗಾಗಿ ಅಂಗವಿಕಲರ ಸಾಧನೆಗೆ 60 ವರ್ಷ ವಯೋಮಿತಿ ನಿಗದಿ ಮಾಡಬಾರದು ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಆದರೂ ವಯೋಮಿತಿ ಸಡಿಲಿಸದೇ ಅನ್ಯಾಯ ಮಾಡಿದ್ದಾರೆ. 60 ವರ್ಷ ದಾಟಿರುವ ಬೀದರ್‌ನ ಅಂಧ ಜಾನಪದ ಕಲಾವಿದರೊಬ್ಬರನ್ನು ಮಾತ್ರ ಗುರುತಿಸಿ ಕಣ್ಣೊರೆಸುವ ತಂತ್ರ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ವಿಕಲಚೇತನರ ರಕ್ಷಣಾ ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಶೇಖರ ಪುಟ್ಟಪ್ಪ ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.