ADVERTISEMENT

ಮಹಿಳೆ ಉಡುಪಿನ ಬಗ್ಗೆ ಅವಹೇಳನ: ಉದ್ಯೋಗಿ ವಜಾಗೊಳಿಸಿದ ಕಂಪನಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2024, 16:29 IST
Last Updated 12 ಅಕ್ಟೋಬರ್ 2024, 16:29 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ‌‘ಸರಿಯಾಗಿ ಉಡುಪು ಧರಿಸದಿದ್ದರೆ ಮಹಿಳೆಯ ಮುಖಕ್ಕೆ ಆ್ಯಸಿಡ್ ಹಾಕುವುದಾಗಿ’ ಆಕೆಯ ಪತಿಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಸಿದ್ದ ವ್ಯಕ್ತಿಯನ್ನು ಕಂಪನಿ ಕೆಲಸದಿಂದ ತೆಗೆದು ಹಾಕಿದೆ.

ಬೆಂಗಳೂರು ವಿಭಾಗದಲ್ಲಿನ ಉದ್ಯೋಗಿ ನಿಖಿತ್ ಶೆಟ್ಟಿ ಎಂಬಾತನನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಐದು ವರ್ಷ ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ‘ಎಕ್ಸ್‌’ನಲ್ಲಿ ಇಟಿಯೋಸ್ ಡಿಜಿಟಲ್ ಸರ್ವಿಸ್ ಎಂಬ ಸಂಸ್ಥೆ‌ ಮಾಹಿತಿ ನೀಡಿದೆ.

ADVERTISEMENT

‘ಕರ್ನಾಟದಲ್ಲಿರುವ ನಿನ್ನ ಪತ್ನಿಗೆ ಸರಿಯಾದ ಉಡುಪು ಧರಿಸುವಂತೆ ಹೇಳು. ಇಲ್ಲದಿದ್ದರೆ ಆ್ಯಸಿಡ್ ಹಾಕುತ್ತೇನೆ’ ಎಂದು ಮಹಿಳೆಯ ಪತಿ, ಪತ್ರಕರ್ತ ಶಹಬಾಜ್ ಅನ್ಸರ್​ ಎಂಬುವರಿಗೆ ಸಂದೇಶ ಕಳುಹಿಸಿದ್ದ. 

ಶಹಬಾಜ್ ತನ್ನ ಪತ್ನಿಯ ಕುರಿತು ಮೆಸೇಜ್ ಕಳುಹಿಸಿದ್ದ ವ್ಯಕ್ತಿಯ ಭಾವಚಿತ್ರ ಸಹಿತವಿರುವ ಸ್ಕ್ರೀನ್ ಶಾಟ್ ಅನ್ನು ತನ್ನ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.

‘ತನ್ನ ಪತ್ನಿ ಬಟ್ಟೆ ಧರಿಸುವ ಬಗ್ಗೆ ನಿರ್ಧರಿಸುವ ವ್ಯಕ್ತಿ ಯಾರು? ಬೆದರಿಕೆ ಸಂದೇಶ ಕಳುಹಿಸಿದ ಈ ವ್ಯಕ್ತಿಯ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಡಿಜಿಪಿ ಅಲೋಕ್ ಮೋಹನ್ ಅವರಿಗೆ ಟ್ಯಾಗ್ ಮಾಡಿ ಒತ್ತಾಯಿಸಿದ್ದರು. ಪೋಸ್ಟ್ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ವ್ಯಾಪಕ ಟೀಕೆಯೂ ವ್ಯಕ್ತವಾಗಿತ್ತು. ನೆಟ್ಟಿಗರು ಸಂದೇಶ ಕಳಿಸಿದ ವ್ಯಕ್ತಿಗಾಗಿ ಹುಡುಕಾಟ ನಡೆಸಿದ್ದರು. 

ತಕ್ಷಣ ಎಚ್ಚೆತ್ತುಕೊಂಡ ಕಂಪನಿ, ‘ನಿಖಿತ್ ಶೆಟ್ಟಿ, ಮಹಿಳೆಯನ್ನು ಗುರಿಯಾಗಿಸಿಕೊಂಡು ಬೆದರಿಕೆ ಸಂದೇಶ ಕಳುಹಿಸಿರುವುದು ಆತಂಕಕಾರಿ. ಈ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇವೆ. ಆತನ ನಡತೆ ಒಪ್ಪುವುದಿಲ್ಲ. ಕೆಲಸ ಮಾಡುವ ಸ್ಥಳದಲ್ಲಿ ಮಹಿಳಾ ಸುರಕ್ಷತೆಗೆ ಮೊದಲ ಆದ್ಯತೆ ನಮ್ಮ ಗುರಿ. ನಿಖಿತ್‌ ಶೆಟ್ಟಿಯನ್ನು ಐದು ವರ್ಷಗಳವರೆಗೆ ಕೆಲಸದಿಂದ ವಜಾಗೊಳಿಸಲಾಗಿದೆ. ಆತನ ವಿರುದ್ಧ ಪ್ರಕರಣ ದಾಖಲಿಸಲಾಗುವುದು’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

‘ಜಾಲತಾಣದಲ್ಲಿ ಸಕ್ರಿಯವಾಗಿರುವ ಪತ್ನಿಗೆ ನಿಂದನೆ ಸಂದೇಶಗಳು ಬರುತ್ತಿರುತ್ತವೆ. ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಲಿಖಿತ್ ಶೆಟ್ಟಿ ಸಂದೇಶ ಭಯಹುಟ್ಟಿಸುವ ಹಾಗೂ ಮಹಿಳಾ ಸುರಕ್ಷತೆ ಬಗ್ಗೆ ಪ್ರಶ್ನಿಸುವಂತಹದ್ದಾಗಿತ್ತು. ಕೆಲಸದಿಂದ ಉದ್ಯೋಗಿ ವಜಾಗೊಳಿಸಿರುವುದು ಶ್ಲಾಘನೀಯ’ ಎಂದು ಮತ್ತೊಂದು ಪೋಸ್ಟ್‌ನಲ್ಲಿ ಶಹಬಾಜ್ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.